ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ಹೆಚ್ಚುತ್ತಿರುವ ಭಿನ್ನಮತದ ಬಗ್ಗೆ ನನಗೆ ತುಂಬಾ ಬೇಸರವಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಥ ಚಟುವಟಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಎಂ.ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೂತನ ಕಾರ್ಯಾಧ್ಯಕ್ಷರಾಗಿ ದಿನೇಶ್‌ಗುಂಡೂರಾವ್ ಅವರು ಅಧಿಕಾರ ಸ್ವೀಕರಿಸಿದ ಸಮಾರಂಭದಲ್ಲಿ ಮಾತನಾಡಿದ ಖರ್ಗೆ ಸಂಪುಟ ಪುನಾರಚನೆ ನಂತರ ಪಕ್ಷದಲ್ಲಿ ಕೆಲ ಬಂಡಾಯ ನಾಯಕರು ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸಾಧನೆಯ ಲಾಭ ಪಡೆದುಕೊಳ್ಳುವುದು ಮಾತ್ರ ನಾಯಕರ ಕೆಲಸವಾಗಬಾರದು ಎಂದು ಹೇಳಿದರು.
ನನಗೂ ನೋವಿದೆ ನೊಂದುಕೊಂಡು ಮನಸ್ಸಿನಲ್ಲಿಟ್ಟುಕೊಂಡು ಬಹಿರಂಗಪಡಿಸುತ್ತಿಲ್ಲ. ಒಂದು ಬಾಯಿಯಿಂದ ಒಡಕಿನ ಮಾತು ಹೊರಬಂದರೆ ಇಡೀ ಪಕ್ಷಕ್ಕೆ ಧಕ್ಕೆ ಉಂಟಾಗುತ್ತದೆ. ಹೀಗಾಗಿ ಅನೇಕ ಬಾರಿ ನೋವು ನುಂಗಿ ಕೊಂಡು ಇರಬೇಕಾಗುತ್ತದೆ. ರೋಗವನ್ನು ಬೀದಿಯಲ್ಲಿ ಹೇಳಿಕೊಂಡರೆ ಔಷಧ ಸಿಗುವುದಿಲ್ಲ. ಬದರಿಗೆ ಅದಕ್ಕಾಗಿಯೇ ಇರುವ ಡಾಕ್ಟರ್ ಬಳಿ ಹೇಳಬೇಕು. ಹೀಗಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದು ಖರ್ಗೆ ಹೇಳಿದ್ದಾರೆ.
ಕೆಲವು ಸಲ, ಕೆಲವು ಮಂದಿ ತಪ್ಪು ತಿಳುವಳಿಕೆ ಇಟ್ಟುಕೊಂಡು ನನ್ನ ತೇಜೋವಧೆ ಮಾಡುತ್ತಿದ್ದಾರೆ. ಅದನ್ನು ನೀವು ತಿಳಿ ಹೇಳಿ ತಡೆಯಬೇಕು. ಎಲ್ಲೆಲ್ಲಿ ತಪ್ಪು ಮಾತನಾಡುತ್ತಿದ್ದಾರೋ ಅದನ್ನು ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಸರಿಪಡಿಸಬೇಕು. ಇದನ್ನು ಬೆಳೆಯಲು ಬಿಟ್ಟರೆ ದೊಡ್ಡ ಅವಾಂತರ ಸೃಷ್ಟಿಯಾಗಲಿದೆ ಎಂದು ಖರ್ಗೆ ತಿಳಿಸಿದ್ದಾರೆ.
Advertisement