ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದು ನೂತನ ಸಿಎಂ ಆಯ್ಕೆ ಮಾಡಿ: ಜನಾರ್ಧನ್ ಪೂಜಾರಿ

ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿರಿಯ...
ಜನಾರ್ಧನ್ ಪೂಜಾರಿ
ಜನಾರ್ಧನ್ ಪೂಜಾರಿ
ಮಂಗಳೂರು: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ಧನ್ ಪೂಜಾರಿ ಅವರು, ತಕ್ಷಣ ರಾಜಿನಾಮೆ ನೀಡುವಂತೆ ಆಗ್ರಹಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಪೂಜಾರಿ, ಸಿದ್ದರಾಮಯ್ಯನವರೇ ನೀವು  ಆರೋಪಿಗಳನ್ನು ರಕ್ಷಿಸುವ ಮೂಲಕ ಜನರಲ್ಲಿ ಜಿಗುಪ್ಸೆ ಹುಟ್ಟಿಸಿದ್ದೀರಿ. ಮುಖ್ಯಮಂತ್ರಿ ಹುದ್ದೆ ಶಾಶ್ವತ ಎಂದು ತಿಳಿದುಕೊಂಡಿದ್ದಾರೆ. ಇದು ಮೂರ್ಖತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.
ಶಾಸಕರೇ ನೀವು ನಿಮ್ಮ ಹಕ್ಕು ಚಲಾಯಿಸಿ, ಶಾಸಕಾಂಗ ಪಕ್ಷದ ಸಭೆ ಕರೆದು ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ. ನಮ್ಮ ಪಕ್ಷದಲ್ಲಿ ಸಿಎಂ ಆಗುವ ಸಾಮರ್ಥ್ಯವಿರುವ ಸಾಕಷ್ಟು ನಾಯಕರಿದ್ದಾರೆ. ನಿಮ್ಮ ಒಳ್ಳೆ ಕಾರ್ಯಕ್ರಮಗಳಿಗೆ ಹೊಗಳಿದ್ದೇನೆ. ಆದರೆ ಅದೆಲ್ಲಾ ಮಸಿ ನುಂಗಿತು. ಪ್ರಾಮಾಣಿಕ ಸಚಿವ ಸೊರಕೆಯನ್ನು ಕಿತ್ತು ಹಾಕಿ ಸರ್ವಾಧಿಕಾರ ನಡೆಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಉಳಿಯಬೇಕು ಅದಕ್ಕಾಗಿ ಇಷ್ಟು ಕಠಿಣವಾಗಿ ಹೇಳುತ್ತಿದ್ದೇನೆ.  ಪರಮೇಶ್ವರ್, ಖರ್ಗೆ, ಡಿಕೆಶಿ, ಎಚ್.ಕೆ.ಪಾಟೀಲ್, ಉಗ್ರಪ್ಪ ಮೊದಲಾದ ನಾನಾ ಸಮುದಾಯದ ಮುಖಂಡರಿದ್ದಾರೆ. ಜನರ ನೆನಪು ಕಡಿಮೆ ಇರಬಹುದು. ಆದರೆ ದಡ್ಡರಲ್ಲ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಡಿವೈಎಸ್ಪಿ ಎಂ ಕೆ ಗಣಪತಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದೀರಿ. ನಿವೃತ್ತ ನ್ಯಾಯಾಧೀಶ ರಿಂದ ತನಿಖೆ ನಡೆಸುವುದಾಗಿ ಹೇಳಿದ್ದೀರಿ. ಆದರೆ ಇಂತಹ ತನಿಖೆಯಿಂದ ನ್ಯಾಯ ಸಿಗುವ ಅವಕಾಶ ಕಡಿಮೆ. ಹೀಗಾಗಿ ಕನಿಷ್ಠ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಮಾಡಿ ಎಂದು ಪುಜಾರಿ ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com