ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿ
ರಾಜಕೀಯ
ಗಣಪತಿ ಗದ್ದಲ: ಉಭಯ ಸದನಗಳ ಕಲಾಪ ಸೋಮವಾರಕ್ಕೆ ಮುಂದೂಡಿಕೆ
ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರವೂ ಪ್ರತಿಪಕ್ಷಗಳ ಕೋಲಾಹಲ, ಪ್ರತಿಭಟನೆಯ...
ಬೆಂಗಳೂರು: ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರವೂ ಪ್ರತಿಪಕ್ಷಗಳ ಕೋಲಾಹಲ, ಪ್ರತಿಭಟನೆಯ ನಡುವೆಯೇ ವಿಧೇಯಕವನ್ನು ಅಂಗೀಕರಿಸಿದ ನಂತರ ವಿಧಾನಮಂಡಲದ ಉಭಯ ಕಲಾಪಗಳನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ 5 ವಿಧೇಯಕಗಳನ್ನು ಅಂಗೀಕರಿಸಲಾಯಿತು. ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆ, ಎಪಿಎಂಸಿ ನಿಯಂತ್ರಣ ಸೇರಿದಂತೆ 5 ವಿಧೇಯಕವನ್ನು ಅಂಗೀಕರಿಸಿದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜಿನಾಮೆಗೆ ಪಟ್ಟು ಹಿಡಿದು ಬಿಜೆಪಿ, ಜೆಡಿಎಸ್ ತೀವ್ರ ಗದ್ದಲ ನಡೆಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.
ಇನ್ನು ವಿಧಾನಪರಿಷತ್ ನಲ್ಲೂ ಪ್ರತಿಪಕ್ಷಗಳು ಜಾರ್ಜ್ ರಾಜಿನಾಮೆ ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದವು. ಏತನ್ಮಧ್ಯೆ ಗೃಹಸಚಿವ ಪರಮೇಶ್ವರ್ ಮಾತನಾಡಿ, ಜಾರ್ಜ್ ರಾಜಿನಾಮೆ ಕೇಳುವ ಹಕ್ಕು ನಿಮಗಿದೆ. ಆದರೆ ರಾಜೀನಾಮೆ ಕೊಡೋದು ದೊಡ್ಡ ವಿಷಯವಲ್ಲ. ತನಿಖೆ ನಡೆಯಲಿ, ಈಗಾಗಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ. ಕೇವಲ ರಾಜಕೀಯಕ್ಕಾಗಿ ಈ ವಿಷಯವನ್ನು ದೊಡ್ಡದಾಗಿ ಮಾಡಬೇಡಿ ಎಂದು ವಿನಂತಿಸಿಕೊಂಡರು.
ಪ್ರತಪಕ್ಷ ನಾಯಕ ಕೆಎಸ್ ಈಶ್ವರಪ್ಪ ಮಾತನಾಡಿ, ಸರಿ ಗಣಪತಿ ಅವರು ಸಂದರ್ಶನದ ಸಿಡಿಯನ್ನು ಸಭಾಪತಿಗಳಿಗೆ ಈಗಾಗಲೇ ನೀಡಲಾಗಿದೆ. ಅದನ್ನು ಎಲ್ಲ ಸದಸ್ಯರು ವೀಕ್ಷಿಸುವ, ಅದರಲ್ಲಿ ಜಾರ್ಜ್ ಹೆಸರು ಹೇಳದೇ ಇದ್ದದ್ದೆ ಹೌದಾದರೆ, ನಾವು ನಮ್ಮ ಪ್ರತಿಭಟನೆಯನ್ನು ವಾಪಸ್ ಪಡೆಯುತ್ತೇವೆ. ಇಲ್ಲ ನೀವು ಜಾರ್ಜ್ ರಾಜಿನಾಮೆ ಪಡೆಯುತ್ತೀರೋ ಎಂಬುದನ್ನು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು. ಆಗ ಕಲಾಪದಲ್ಲಿ ಗದ್ದಲ, ಕೋಲಾಹಲ ನಡೆಯಿತು..ಇದರ ನಡುವೆಯೇ ವಿಧೇಯಕಗಳನ್ನು ಅಂಗೀಕರಿಸಲಾಯಿತು. ನಂತರ ಸಭಾಪತಿ ಡಿಎಚ್ ಶಂಕರಮೂರ್ತಿ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ