ಬೆಂಗಳೂರು: ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಳೆದ ಎರಡು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿರುವ ಬಿಜೆಪಿ ಇದೀಗ ಸದನದ ಹೊರಗೂ ತನ್ನ ಹೋರಾಟವನ್ನು ತೀವ್ರಗೊಳಿಸಿದೆ. ಜಾರ್ಜ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಸೇರಿದಂತೆ 30ಕ್ಕೂ ಅಧಿಕ ಶಾಸಕರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಅವರಿಗೆ ಸದನವನ್ನು ಎದುರಿಸುವ ಧೈರ್ಯ ಇಲ್ಲ, ಸಿಎಂ ಜಾರ್ಜ್ ಅವರ ಪರ ವಕಾಲತ್ತು ವಹಿಸೋದಾದರೆ ಹೊರಗಡೆ ವಹಿಸಲಿ, ಸದನದಲ್ಲಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಗಣಪತಿ ಪತ್ನಿ ಪಾವನಾ ಅವರಿಗೆ ನ್ಯಾಯ ಸಿಗಬೇಕು, ಹೀಗಾಗಿ ಅವರನ್ನು ದೆಹಲಿಗೆ ಕರೆದೊಯ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೇಟಿ ಮಾಡಿಸುವುದಾಗಿ ಯಡಿಯೂರಪ್ಪ ತಿಳಿಸಿದರು.
ಎಸ್ಎಂಕೆ, ಕಾಗೋಡು, ಪೂಜಾರಿಗೆ ಜೈ
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಎಸ್ ಎಂ ಕೃಷ್ಣ, ಕಾಗೋಡು ತಿಮ್ಮಪ್ಪ ಹಾಗೂ ಜನಾರ್ದನ ಪೂಜಾರಿ ಅವರಿಗೆ ಬಿಜೆಪಿ ಮುಖಂಡರು ಜೈಘೋಷ ಹಾಕಿದರು. ಪ್ರಕರಣದ ಬಗ್ಗೆ ನೇರ ನುಡಿ ಮಾತನಾಡಿರುವ ಈ ಮೂರು ಕಾಂಗ್ರೆಸ್ ಮುಖಂಡರಿಗೆ ಜೈ ಹೇಳುವುದಾಗಿ ಬಿಜೆಪಿ ಮುಖಂಡರು ತಿಳಿಸಿದರು.