
ಮೈಸೂರು: ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರ ತಪ್ಪುಗಳನ್ನು ನಾನು ಜನರ ಮುಂದೆ ಹೇಳುತ್ತಿರುವುದಕ್ಕೆ, ಇಬ್ಬರು ಸೇರಿ ನನ್ನನ್ನು ಜೈಲಿಗೆ ಕಳುಹಿಸಲು ಪಿತೂರಿ ನಡೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಕೇವಲ ಒಂದೇ ಒಂದು ದಿನವಾದರೂ ನನ್ನನ್ನು ಜೈಲಿಗೆ ಕಳುಹಿಸುವಂತೆ ಉನ್ನತ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟ ನಿರ್ದೇಶನ ನೀಡಿದ್ದಾರೆಂದು ಕುಮಾರ ಸ್ವಾಮಿ ಆರೋಪಿಸಿದ್ದಾರೆ.
ಆದಾಯಕ್ಕಿಂತ ಹೆಚ್ಚುಪ ಆಸ್ತಿ ಗಳಿಗೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ನನ್ನನ್ನು ಭೇಟಿ ಮಾಡುವ ಮುನ್ನವೇ ನಾನು ಹೈ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದೆ. ಆದರೆ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ನನ್ನ ಹೇಳಿಕೆ ದಾಖಲಿಸುವಂತೆ ದುಂಬಾಲು ಬಿದ್ದಿದ್ದರು. ಆದರೆ ನನಗೆ ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ನನ್ನನ್ನು ಬಂಧಿಸಲಿಲ್ಲ ಎಂದು ಎಚ್ ಡಿ ಕೆ ಹೇಳಿದ್ದಾರೆ.
ರಾಜ್ಯದ ಒಬ್ಬ ಮಾಜಿ ಮುಖ್ಯಮಂತ್ರಿಗೆ ಈ ದುಸ್ಥಿತಿ ಎದುರಾಗಿತ್ತಿ, ಅಂಥದ್ದರಲ್ಲಿ ಸಾಯುವ ಮುನ್ನ ಸಂದರ್ಶನದಲ್ಲಿ ಹೇಳಿಕೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ ಪಿ ಗಣಪತಿ ಅವರ ತಂದೆ ಕುಶಾಲಪ್ಪ ಅವರ ಸ್ಥಿತಿ ಏನು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ತಮ್ಮ ಮಗ ರಾಕೇಶ್ ಮತ್ತವರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಇನ್ಸ್ ಪೆಕ್ಟರ್ ಜಿಎನ್ ಮೋಹನ್ ವಿರುದ್ಧ ಸಿಎಂ ಸಿದ್ದರಾಮಯ್ಯ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿರುವ ಕುಮಾರಸ್ವಾಮಿ, ಸರ್ಕಾರ ಹಾಗೂ ಪಕ್ಷದ ಘನತೆಗೆ ಧಕ್ಕೆಯಾಗುತ್ತದೆಂಬ ಹಿನ್ನೆಲೆಯಲ್ಲಿ ಜಾರ್ಜ್ ರಾಜೀನಾಮೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
Advertisement