ಮುಷ್ಕರಕ್ಕೆ ಕುಮ್ಮಕ್ಕು ನೀಡುವಂತ ಚಿಲ್ಲರೆ ಕೆಲಸ ಮಾಡುವ ಅನಿವಾರ್ಯತೆ ಇಲ್ಲ: ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಪೊಲೀಸರು ಹಾಗೂ ಸರ್ಕಾರಿ ನೌಕರರ ಮುಷ್ಕರಕ್ಕೆ ಕುಮ್ಮಕ್ಕು ನೀಡುವಂತಹ ಚಿಲ್ಲರೆ ಕೆಲಸ ಮಾಡುವ ಅನಿವಾರ್ಯತೆ ನಮಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಸ್ಮಾ ಜಾರಿ, ಬೆದರಿಕೆ ಸುತ್ತೋಲೆ ಮೂಲಕ ಸರ್ಕಾರಿ ನೌಕರರು ಹಾಗೂ ಪೊಲೀಸ್ ಸಿಬ್ಬಂದಿ ಮುಷ್ಕರ ಹತ್ತಿಕ್ಕುವ ಪ್ರಯತ್ನ ರಾಜ್ಯದಲ್ಲಿ ಬ್ರಿಟಿಷ್ ರಾಜ್ ಆಡಳಿತ ನಡೆಯುತ್ತಿರುವುದಕ್ಕೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ನೌಕರರರ ಸಂಘಟನೆ ಹಾಗೂ ಪೊಲೀಸ್ ಮಹಾಸಂಘದ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಬಗೆಹರಿಸಬಹುದಾಗಿದ್ದ ವಿಷಯವನ್ನು ದೊಡ್ಡದು ಮಾಡಿರುವ ರಾಜ್ಯ ಸರ್ಕಾರ, ಪ್ರತಿಪಕ್ಷಗಳ ಮೇಲೆ ಗೂಬೆ ಕೂರಿಸುತ್ತಿದೆ.
ಪೊಲೀಸ್ ಮಹಾಸಂಘದ ಅಧ್ಯಕ್ಷ ಸೇರಿ ಇತರೆ ಪದಾಧಿಕಾರಿಗಳನ್ನು ಬಂಧಿಸಿ ಪೌರುಷ ತೋರಿರುವ ಸರ್ಕಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಯಾಕೆ ಬಂಧಿಸಲಿಲ್ಲ. ಸರ್ಕಾರಿ ನೌಕರರರನ್ನು ಕಂಡರೆ ಭಯವೇ? ಪೊಲೀಸರಿಗೆ ಧ್ವನಿ ಇಲ್ಲ ಎಂಬ ದರ್ಪವೇ ಎಂದು ಪ್ರಶ್ನಿಸಿದರು.
ಪೊಲೀಸ್ ಕುಟುಂಬಗಳಿಗೆ ಸರ್ಕಾರ ನೀಡುತ್ತಿರುವ ಆಹಾರಧಾನ್ಯ ಕಳಪೆ ಗುಣಮಟ್ಟದ್ದು. ಪೊಲೀಸ್ ಪೇದೆಗಳಿಗೆ ನೀಡುತ್ತಿರುವ ವೇತನವೂ ಅಲ್ಪ ಮೊತ್ತ. ಹೀಗಾಗಿ, ಅವರು ನೆಮ್ಮದಿಯಿಂದ ಜೀವನ ನಡೆಸಲು ಹೇಗೆ ಸಾಧ್ಯ? ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆ ಕಾರ್ಯ ಮಾಡುವ ಪೊಲೀಸರಿಗೆ ಸೂಕ್ತ ಸೌಲಭ್ಯ ಕೊಡದಿದ್ದರೆ ಸರ್ಕಾರ ಬೇರೆ ಏನು ಮಾಡುತ್ತದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ