ಬೆಂಗಳೂರು: ಜುಲೈ 4ರಿಂದ ಜುಲೈ 23ರವರೆಗೆ ವಿಧಾನಸಭೆ ಮುಂಗಾರು ಅಧಿವೇಶನ ನಡೆಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರು ಬುಧವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದಾರಮಯ್ಯ ನೇತೃತ್ವದ ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಯಚಂದ್ರ ಅವರು, ಜುಲೈ 4ರಿಂದ ಜುಲೈ 23ರವರೆಗೆ ಬೆಂಗಳೂರಿನಲ್ಲಿ ಮುಂಗಾರು ಅಧಿವೇಶನ ನಡೆಯಲಿದೆ ಎಂದರು.
ಅಕ್ರಮ ಪಡಿತರ ಚೀಟಿ ಹೊಂದಿರುವವರ ಬಗ್ಗೆ ಹಾಗೂ ಪಡಿತರ ದಾಸ್ತಾನುದಾರರ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ ಯೋಜನೆಗೆ ಮತ್ತು ರಾಜ್ಯ ವಸತಿ ನೀತಿ-2015ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ. ಅಲ್ಲದೆ 1021 ಕೋಟಿ ರುಪಾಯಿ ವೆಚ್ಚದ ಕೆಂಪವಾಡ ಬಸವ ಏತ ನೀರಾವರಿ ಯೋಜನೆಗೂ ಸಂಪುಟ ಸಭೆ ಅನುಮತಿ ನೀಡಿದೆ ಎಂದು ಸಚಿವರು ತಿಳಿಸಿದರು.
ಇನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೂಡ್ಲಿಗೆ ಡಿವೈಎಸ್ ಪಿ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಅನುಮಾ ಶೆಣೈ ಬಗ್ಗೆ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ. ಆದರೆ ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಜಯಚಂದ್ರ ಅವರು, ಅನುಪಮಾ ರಾಜಿನಾಮೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದರು.