

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕಳೆದ 3 ವರ್ಷಗಳಿಂದ ಗಜ ಪ್ರಸವದಂತಾಗಿದ್ದ ಸಂಪುಟ ಪುನಾರಚನೆಯನ್ನು ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿಸಿದ್ದಾರೆ.
ಅಸಮಾಧಾನಗೊಂಡಿರುವ ಶಾಸಕರನ್ನು ಸಿದ್ದರಾಮಯ್ಯ ವಿಶ್ವಾಸಕ್ಕೆ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಈ ಹತಾಶ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹಾನಿ ಮಾಡುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.
ಹಲವು ಕಾಂಗ್ರೆಸ್ ಶಾಸಕರು ಸಿಎಂ ಸಿದ್ದರಾಮಯ್ಯ ವಿರುದ್ದ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಸಿಎಂ ವಿರುದ್ಧ ಕುದಿಯುತ್ತಿರುವ ಶಾಸಕರಿಗೆ ಗಾಳ ಹಾಕಲು ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳು ಹವಣಿಸುತ್ತಿವೆ.
ಸಂಪುಟ ಪುನಾರಚನೆ ಬಹಳ ತಡವಾಗಿ ಆಗಿದೆ, ಪುನಾರಚನೆ ಸರ್ಕಾರದ ಇಮೇಜನ್ನು ಹೆಚ್ಚಿಸುವ ಬದಲು ಪಕ್ಷದೊಳಗೆ ಭಿನ್ನಮತ ಭುಗಿಲೇಳಲು ಕಾರಣವಾಗಿದೆ. ಸಂಪುಟ ಪುನಾರಚನೆಯಿಂದ ಕೆಲವರು ಮಾತ್ರ ತೃಪ್ತರಾಗಿದ್ದಾರೆ, ಉಳಿದಂತೆ ಹಲವು ನಾಯಕರಿಗೆ ಪುನಾರಚನೆ ಕಹಿ ಬೇವಾಗಿದೆ.
ಕಾಂಗ್ರೆಸ್ ನಲ್ಲಿ ಭುಗಿಲೆದ್ದಿರುವ ಈ ಅಸಮಾಧಾನ ಬಿಜೆಪಿಗೆ ವರವಾಗಿದೆ. ಕಾಂಗ್ರೆಸ್ ಭಿನ್ನಮತ ಬಿಜೆಪಿಯ ಮಿಷನ್-150 ಗೆ ಅನುಕೂಲವಾಗಲಿದೆ. ಪ್ರತಿಯೊಂದು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ.
ಪ್ರಾಮಾಣಿಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬದಲು ಕೆಲವರಿಗೆ ಮಂತ್ರಿಗಿರಿ ನೀಡಬೇಕು ಎನ್ನುವ ಉದ್ದೇಶಕ್ಕಾಗಿ ಪುನಾರಚನೆ ಮಾಡಲಾಗಿದೆ ಎಂದು ಹಲವು ಕಾಂಗ್ರೆಸ್ ಶಾಸಕರ ಅಸಮಾಧಾನವಾಗಿದೆ ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಹೇಳಿದ್ದಾರೆ.
ಇನ್ನೂ ಮೈಸೂರು, ಮಂಡ್ಯ ಭಾಗದ ಕಾಂಗ್ರೆಸ್ ಭಿನ್ನಮತೀಯ ಒಕ್ಕಲಿಗ ಶಾಸಕರನ್ನು ಸೆಳೆಯಲು ಜೆಡಿಎಸ್ ಕೂಡ ಗಾಳ ಹಾಕುತ್ತಿದೆ.
ತಮ್ಮ ಆಪ್ತ ಶಿವಶಂಕರ್ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವ ಬದಲು ಉಪ ಸಬಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಭಾನುವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಶಿವಶಂಕರ್ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಕೇಳಿದ್ದರೂ ಅದನ್ನು ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಒಟ್ಟಾರೆ ಸಂಪುಟ ಪುನಾರಚನೆ ಕೆಲವರಿಗೆ ಮಾತ್ರ ತೃಪ್ತಿ ತಂದಿದ್ದು, ಹಲವರಿಗೆ ಅಸಮಾಧಾನ ತಂದಿದೆ, ಬೂದಿ ಮುಚ್ಚಿದಂತಿದ್ದ ಕಾಂಗ್ರೆಸ್ ನ ಒಳಜಗಳಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಭಿನ್ನಮತ, ಅಸಮಾಧಾನ ಸಿಎಂ ಸಿದ್ದರಾಮಯ್ಯ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
Advertisement