ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿಯನ್ನು ವೇಶ್ಯಾವಾಟಿಕೆಗೆ ಹೋಲಿಸಿದ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ಇಂತಹ ಯಾವುದೇ ಹೇಳಿಕೆಯನ್ನು ಸಚಿವರ ನೀಡಬಾರದು ಎಂದು ಆಂಜನೇಯ ಅವರಿಗೆ ಕೆಪಿಸಿಸಿ ಅಧ್ಯಕ್ಷರು ತಾಕೀತು ಮಾಡಿದ್ದಾರೆ.
ಈ ಸಂಬಂಧ ಸಚಿವ ಆಂಜನೇಯ ಅವರಿಗೆ ಪತ್ರ ಬರೆದಿರುವ ಪರಮೇಶ್ವರ್, ಇತ್ತೀಚೆಗೆ ನೀವು ನೀಡಿರುವ ಹೇಳಿಕೆ ಬಹುಜನರ ಭಾವನೆಗೆ ಧಕ್ಕೆಯಾಗಿದೆ. ರಾಜ್ಯತ ಶಿತ್ರಣ ಕ್ಷೇತ್ರಕ್ಕೆ ಖಾಸಗಿ ಸಂಸ್ಥೆಗಳು ಅಪಾರ ಕೊಡುಗೆ ನೀಡಿವೆ. ಸಚಿವರಾದ ತಾವು ಸಾರ್ವಜನಿಕವಾಗಿ ನೀಡುವ ಹೇಳಿಕೆ ಸೌಜನ್ಯದಿಂದ ಕೂಡಿರಬೇಕು.
ಅನಗತ್ಯ ಹೇಳಿಕೆ ನೀಡಿ ಗೊಂದಲ ಉಂಟು ಮಾಡುವ ಬದಲು ಮಿತಿಮೀರಿದ ಶುಲ್ಕ ಪಡೆಯುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ. ಉನ್ನತ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆಗಳನ್ನು ನೀಡುವುದರಿಂದ ಪಕ್ಷದ ವರ್ಚಸ್ಸಿನ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಮಠಾಧೀಶರು, ಧಾರ್ಮಿಕ ಮುಖಡಂರು ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಿಮ್ಮ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಇನ್ನು ಮುಂದೆ ಈ ರೀತಿ ಹೇಳಿಕೆಗಳನ್ನು ನೀಡಬಾರದು ಎಂದು ಜಿ ಪರಮೇಶ್ವರ್ ಪತ್ರದಲ್ಲಿ ತಿಳಿಸಿದ್ದಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿಯನ್ನು ವೇಶ್ಯಾವಾಟಿಕೆಗೆ ಹೋಲಿಸಿದ ಸಮಾಜ ಕಲ್ಯಾಣ ಸಚಿವ ಆಂಜನೇಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಕರ್ನಾಟಕ ಅಸೋಸಿಯೇಟೆಡ್ ಮ್ಯಾನೇಜ್ ಮೆಂಟ್ ಆಫ್ ಇಂಗ್ಲಿಷ್ ಸ್ಕೂಲ್ಸ್ ನಿರ್ಧರಿಸಿತ್ತು.
ಕೆಲವು ಖಾಸಗಿ ಶಾಲೆಗಳು ಹಣ ವಸೂಲಿ ಮಾಡಿ ವಿದ್ಯಾರ್ಥಿ ಪಾಲಕರನ್ನು ಶೋಷಣೆ ಮಾಡುತ್ತಿರುವುದು ನಿಜ ಎಂದು ಹೇಳಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕಾರ್ಯವೈಕರಿಯನ್ನು ವೇಶ್ಯಾವಾಟಿಕೆಗೆ ಹೋಲಿಸಿದ್ದರು.