ಪರಿಷತ್ ಚುನಾವಣೆಯಲ್ಲಿ ಎರಡನೇ ಅಭ್ಯ.ರ್ಥಿ ಗೆಲುವಿಗೆ ಬಿಜೆಪಿ-ಜೆಡಿಎಸ್ ಮೈತ್ರಿ!

ವಿಧಾನಪರಿಷತ್ ಚುನಾವಣೆಯಲ್ಲಿ ತನ್ನ ಎರಡನೇ ಅಭ್ಯರ್ಥಿಯನ್ನು ಗೆಲ್ಲಿಸಲು ಜೆಡಿಎಸ್ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳು
ಯಡಿಯೂರಪ್ಪ ಮತ್ತು ಕುಮಾರಸ್ವಾಮಿ
ಯಡಿಯೂರಪ್ಪ ಮತ್ತು ಕುಮಾರಸ್ವಾಮಿ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ತನ್ನ ಎರಡನೇ ಅಭ್ಯರ್ಥಿಯನ್ನು ಗೆಲ್ಲಿಸಲು ಜೆಡಿಎಸ್ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

ಎರಡು ಪಕ್ಷಗಳು ಒಂದೊಂದು ಸ್ಥಾನ ಸುಲಭವಾಗಿ ಗೆಲ್ಲಲಿದ್ದು, ಎರಡನೇ ಸ್ಥಾನಕ್ಕಾಗಿ ಹಗ್ಗಜಗ್ಗಾಟ ನಡೆಸುವ ಸಾಧ್ಯತೆಯಿದೆ. ಸೋಮವಾರ ಜೆಡಿಎಸ್‌ ತನ್ನ ಎರಡನೇ ಅಭ್ಯರ್ಥಿಯನ್ನಾಗಿ ಡಾ.ಎಸ್‌.ಎಂ.ವೆಂಕಟಪತಿ ಅವರನ್ನು ಕಣಕ್ಕಿಳಿಸಿದ್ದು, ನಿನ್ನೆ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ತನ್ನ ಎರಡನೇ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಸಹಾಯ ಕೋರುವುದಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಇನ್ನು ಬಿಜೆಪಿ ಕೂಡ ತನ್ನ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿದ್ದು, ಪರಿಷತ್‌ ಸದಸ್ಯತ್ವದಿಂದ ನಿರ್ಗಮಿಸುತ್ತಿರುವ ಲೆಹರ್‌ಸಿಂಗ್‌ ಅಥವಾ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಅವರ ಪೈಕಿ ಒಬ್ಬರು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಬಿಜೆಪಿ ನಾಯಕರು ಸಂಖ್ಯಾ ಬಲದ ಆಧಾರದ ಮೇಲೆ ಜೆಡಿಎಸ್‌ ತಮಗೇ ಬೆಂಬಲ ನೀಡಬೇಕು ಎಂಬ ವಾದವನ್ನೂ ಮಂಡಿಸುತ್ತಿದ್ದಾರೆ. ಮೊದಲ ಅಭ್ಯರ್ಥಿ ಗೆಲ್ಲಲು 29 ಕನಿಷ್ಠ ಮತಗಳು ಬೇಕು. ಒಂದು ಹೆಚ್ಚುವರಿಯಾಗಿ ಇಟ್ಟುಕೊಂಡರೂ 30 ಮತಗಳಾದವು. ಜೆಡಿಎಸ್‌ಗಿರುವ ಶಾಸಕರ ಸಂಖ್ಯಾಬಲ 40.

ಅಂದರೆ, ಹೆಚ್ಚುವರಿಯಾಗಿ 10 ಉಳಿಯುತ್ತವೆ. ಈ 10ರ ಪೈಕಿ ಆರು ಮಂದಿ ಭಿನ್ನಮತೀಯ ಶಾಸಕರು ತಮ್ಮ ಪಕ್ಷದ ಅಭ್ಯರ್ಥಿಗೇ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ. ಅಲ್ಲಿಗೆ ಜೆಡಿಎಸ್‌ನ ಎರಡನೇ ಅಭ್ಯರ್ಥಿಗೆ ಸಿಗುವುದೇ ನಾಲ್ಕೈದು ಮತಗಳು. ಬಿಜೆಪಿಗೆ ಹೆಚ್ಚುವರಿಯಾಗಿ 15 ಮತಗಳು ಉಳಿಯಲಿವೆ. ಜತೆಗೆ ಕೆಜೆಪಿ ಮತ್ತು ಬಿಎಸ್ಸಾರ್‌ ಕಾಂಗ್ರೆಸ್‌ ಸೇರಿ 18ರ ಗಡಿ ದಾಟಬಹುದು. ಪಕ್ಷೇತರರ ನೆರವನ್ನೂ ಪಡೆಯಬಹುದು ಎನ್ನುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com