ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಶ್ರೀನಿವಾಸ್ ಪ್ರಸಾದ್ ನಿರ್ಧಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ರೆಬಲ್ ಆಗಿದ್ದ ಮಾಜಿ ಸಚಿವ...
ವಿ. ಶ್ರೀನಿವಾಸ್ ಪ್ರಸಾದ್
ವಿ. ಶ್ರೀನಿವಾಸ್ ಪ್ರಸಾದ್
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ರೆಬಲ್ ಆಗಿದ್ದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಈಗ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ.
ಇಂದು ತಮ್ಮ ಸ್ವಕ್ಷೇತ್ರ ನಂಜನಗೂಡಿನಲ್ಲಿ ಅಭಿವೃದ್ಧಿ ಕಾಮಾಗಾರಿಗಳ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೇ 17ರಂದು ವಿಧಾನಸಭೆ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಭೇಟಿಗೆ ಸಮಯ ಕೇಳಿದ್ದೇನೆ. ಅಂದೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದೇನೆ ಎಂದಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ನವರು ಪ್ರೀತಿಯಿಂದ ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡೂ ಬಲಿಷ್ಠ ಪಕ್ಷ. ಆದರೆ ಯಾವ ಪಕ್ಷ ಸೇರಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಶ್ರೀನಿವಾಸ ಪ್ರಸಾದ್ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಜೆಡಿಎಸ್ ಅಥವಾ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಕಾವೇರಿ ಗಲಾಟೆ ಹಾಗೂ ದಸರಾ ಹಿನ್ನೆಲೆಯಲ್ಲಿ ರಾಜಿನಾಮೆ ದಿನಾಂಕವನ್ನು ಮುಂದೂಡಿದ್ದರು.
ಇದೇ ವೇಳೆ ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಟ್ಟ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಶ್ರೀನಿವಾಸ್ ಪ್ರಸಾದ್ ಅವರು, ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ಹೈಕಮಾಂಡ್ ಬ್ರೇನ್ ವಾಶ್ ಮಾಡಿದ್ದಾರೆ. ಹೀಗಾಗಿ ಅವರು ಕಾರಣವಿಲ್ಲದೆ ನನ್ನ ಕೈಬಿಟ್ಟಿದ್ದಾರೆ ಎಂದರು. ಅಲ್ಲದೆ ತಮ್ಮನ್ನು ಸಚಿವ ಸಂಪುಟದಿಂದ ಕೈಬಿಡಲು ಕಾರಣ ಏನು ಅಂತ ಸಿದ್ದರಾಮಯ್ಯ ಹೇಳಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com