ಬೆಂಗಳೂರು: ಕಾವೇರಿ ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಬುಧವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶೆಟ್ಟರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ವಿವಾದ ಪರಿಹಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಹೇಳಿ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದರು.
ಇದೇ ವೇಳೆ ರಾಜ್ಯದ ಪರ ಹಿರಿಯ ವಕೀಲ ಫಾಲಿ ನಾರಿಮನ್ ಅವರು 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಒಪ್ಪಿಕೊಂಡು ಕಾವೇರಿ ವಿಚಾರದಲ್ಲಿ ದೊಡ್ಡ ಬ್ಲಂಡರ್ ಮಾಡಿದ್ದಾರೆ. ಒಟ್ಟಾರೆ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕರ್ನಾಟಕದ ಲೀಗಲ್ ಟೀಮ್ ಸಂಪೂರ್ಣವಾಗಿ ಎಡವಿದೆ ಎಂದು ಆರೋಪಿಸಿದರು.
ಕಾವೇರಿ ವಿಚಾರದಲ್ಲಿ ಸಂಭವಿಸಿದ ಗಲಾಟೆಯಿಂದ ರಾಜ್ಯಕ್ಕೆ 25 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಗಲಾಟೆ ವಿಚಾರದಲ್ಲಿ ಮಾಹಿತಿ ಸಂಗ್ರಹಿಸುವಲ್ಲಿಯೂ ಗುಪ್ತದಳ ವಿಫಲವಾಗಿದೆ ಎಂದು ದೂರಿದರು.