
ಬೆಂಗಳೂರು: ಕಾವೇರಿ ವಿವಾದ ಕಳೆದ 10 ವರ್ಷಗಳಿಂದ ದೂರವಾಗಿದ್ದ ಗುರು ಶಿಷ್ಯರನ್ನು ಮತ್ತೆ ಹತ್ತಿರ ತಂದಿದೆ. ಜೆಡಿಎಸ್ ನಿಂದ ಹೊರ ಬಂದ ಮೇಲೆ ಸುಮಾರು ಒಂದು ದಶಕದ ಕಾಲ ಸಿಎಂ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಭೇಟಿ ನೀಡಿರಲಿಲ್ಲ.
ಆದರೇ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಮೊನ್ನೆ ಸಿಎಂ ಸಿದ್ದರಾಮಯ್ಯ ಜೆಡಿಎಸ್ ವರಿಷ್ಠ ಎಚ್ .ಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಸಿಎಂ ದೇವೇಗೌಡರ ಮನೆಗೆ ತೆರಳುವಂತೆ ಮಾಡಿದ್ದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಎಂದು ಮೂಲಗಳು ತಿಳಿಸಿವೆ.
ಹಲವು ವರ್ಷಗಳ ನಂತರ ಮಾಜಿ ಪ್ರಧಾನಿ ದೇವೇಗೌಡರನ್ನು ಅವರ ಮನೆಯಲ್ಲೇ ಭೇಟಿ ಮಾಡಿ ಸರ್ವ ಪಕ್ಷ ಸಭೆಗೆ ಅವರನ್ನು ಕರೆದುಕೊಂಡು ಬರುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದರು ಎಂಬುದಾಗಿ ಮೂಲಗಳು ತಿಳಿಸಿವೆ.
ದಶಕಗಳ ಕಾಲದಿಂದ ದೇವೇಗೌಡರ ಕುಟುಂಬದೊಂದಿಗೆ ರಾಜಕೀಯ ದ್ವೇಷ ಸಾಧಿಸುತ್ತಾ ಬಂದಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇದ್ದಕ್ಕಿದ್ದಂತೆ ಈ ಸಲಹೆ ನೀಡಿದ್ದನ್ನು ಕಂಡು ಇಡೀ ಸಚಿವ ಸಂಪುಟವೇ ನಿಬ್ಬೆರಗಾಗಿತ್ತು.
ದೇವೇಗೌಡರ ರಾಜಕೀಯ ಅನುಭವ ದೊಡ್ಡದು. ರಾಜ್ಯದಿಂದ ಮೊದಲ ಬಾರಿ ಪ್ರಧಾನಿಯಾದವರು ಅವರು. ಹೀಗಾಗಿ ಒಕ್ಕೂಟ ವ್ಯವಸ್ಥೆಯ ಒಳಸುಳಿಗಳು ಅವರಿಗೆ ಚೆನ್ನಾಗಿ ಗೊತ್ತಿರುತ್ತವೆ. ಈ ಸಂದರ್ಭದಲ್ಲಿ ನಾವು ಅರ್ಧ ಶತಮಾನಕ್ಕೂ ಹೆಚ್ಚು ಕಾಲದ ಸುದೀರ್ಘ ಅನುಭವ ಹೊಂದಿದ ದೇವೇಗೌಡರ ಮಾರ್ಗದರ್ಶನವನ್ನು ಪಡೆಯುವುದು ಸೂಕ್ತ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದರು ಎನ್ನಲಾಗಿದೆ.
1996 ರಿಂದ ಸರ್ವ ಪಕ್ಷ ಸಭೆಗೆ ದೇವೇಗೌಡರು ಒಂದು ಬಾರಿಯೂ ಹಾಜರಾಗಿರಲಿಲ್ಲ. 20 ವರ್ಷಗಳ ನಂತರ ಸರ್ವ ಪಕ್ಷ ಸಭೆಯಲ್ಲಿ ದೇವೇಗೌಡರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
Advertisement