ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದರೆ ಶಿಸ್ತುಕ್ರಮ: ಕಾಂಗ್ರೆಸ್

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆ ವೇಳೆ ಪದೇ ಪದೇ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ಮುಜುಗರ ಉಂಟು ...
ಜನಾರ್ದನ ಪೂಜಾರಿ ಮತ್ತು ಎಚ್. ವಿಶ್ವನಾಥ್
ಜನಾರ್ದನ ಪೂಜಾರಿ ಮತ್ತು ಎಚ್. ವಿಶ್ವನಾಥ್
ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆ ವೇಳೆ ಪದೇ ಪದೇ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ಮುಜುಗರ ಉಂಟು ಮಾಡುತ್ತಿದ್ದ ನಾಯಕರುಗಳಿಗೆ ಕಾಂಗ್ರೆಸ್ ಬಿಸಿ ಮುಟ್ಟಿಸಲು ಮುಂದಾಗಿದೆ.
ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಚ್ಚರಿಕೆ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಬೆಂಗಳೂರಿಗೆ ಆಗಮಿಸಿದ ನಂತರ ಮಾತನಾಡಿದ ದಿನೇಶ್ ಗುಂಡೂರಾವ್, ಕೆಲ ಹಿರಿಯ ನಾಯಕರು ಸರ್ಕಾರದ ವಿರುದ್ಧ ಹಾಗೂ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವುದು ಹೈ ಕಮಾಂಡ್ ಗಮನಕ್ಕೆ ಬಂದಿದೆ. ತಪ್ಪು ತಿದ್ದುಕೊಳ್ಳದಿದ್ದರೇ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಹೈಕಮಾಂಡ್ ಸಂದೇಶ ರವಾನಿಸಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ಹಿರಿಯ ನಾಯಕರಾದ ಎಚ್‌.ವಿಶ್ವನಾಥ್‌, ಬಿ.ಜನಾರ್ದನ ಪೂಜಾರಿ, ಸೇರಿದಂತೆ ಯಾರ ಹೆಸರನ್ನೂ ಪ್ರಸ್ತಾಪಿಸದೆ ದಿನೇಶ್ ಪರೋಕ್ಷವಾಗಿ ಈ ಎಚ್ಚರಿಕೆ ನೀಡಿದರು.
ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನ ಸಭೆ  ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಜಯಗಳಿಸಲು ಸಾಧ್ಯವಿಲ್ಲ ಎಂದು ಜನಾರ್ಧನ ಪೂಜಾರಿ ಟೀಕಿಸಿದ್ದರು.
ಪೂಜಾರಿ ಅವರ ಹೆಸರನ್ನು ಹೇಳದ ದಿನೇಶ್, ಮಂಗಳೂರು ಮೂಲದ ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಪಕ್ಷ ಮತ್ತು ಸರ್ಕಾರದ ವಿರುದ್ಧ ಉಪ ಚುನಾವಣೆ ವೇಳೆ ಟೀಕೆ ಮಾಡಿದ್ದರು. ಪಕ್ಷದೊಳಗೆ ಇಂಥಹ ಪಕ್ಷ ವಿರೋಧಿ ಚಟುವಟಿಕೆಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಕಳೆದ ವರ್ಷ ಸಂಪು ಪುನಾರಚನೆ ನಂತರ ಸಿದ್ದರಾಮಯ್ಯ ಕಾರ್ಯ ವೈಖರಿ ವಿರುದ್ದ ಸೋನಿಯಾಗಾಂಧಿ ಗೆ ಪತ್ರ ಬರೆದಿದ್ದ ಮಾಜಿ ಸಂಸದ ಎಚ್. ವಿಶ್ವನಾಥ್ ರಾಜ್ಯದಲ್ಲಿ ನಾಯಕತ್ವ ಬದಲಾಯಿಸುವಂತೆ ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com