ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಕೆಂಪು ದೀಪ ತೆಗೆದ್ರೆ ಸಾಕಾಗಲ್ಲ, ಅವರು ಭದ್ರತೆಯನ್ನೂ ತ್ಯಜಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರು ಶುಕ್ರವಾರ ಪ್ರಧಾನಿಗೆ ಸವಾಲು ಹಾಕಿದ್ದಾರೆ.
ಇಂದು ಕೇಂದ್ರ ಸರ್ಕಾರ ಗಣ್ಯರ ಕಾರಿನ ಮೇಲೆ ಕೆಂಪು ದೀಪ ನಿಷೇಧಿಸಿದ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ರಾಯರೆಡ್ಡಿ ಅವರು, ಕೆಂಪು ದೀಪ ತೆಗೆದು ಹಾಕುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಮೋದಿ ಅವರು ಮೊದಲು ಭದ್ರತೆಯನ್ನು ತೆಗೆದು ಹಾಕಲಿ. ತಮ್ಮದೂ ತೆಗೆದು ಹಾಕಲಿ ಎಂದರು.
ಈ ವೇಳೆ ಮೋದಿಯವರಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಭದ್ರತೆ ತೆಗೆಯಲು ಹೇಗೆ ಸಾಧ್ಯ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು. ಅಧಿಕಾರ ಬೇಕು ಅಂದ್ರೆ ಸಾಯಲಿ ಬಿಡಿ. ಅಧಿಕಾರ ಬೇಕಾದ್ರೆ ಸಾಯಬೇಕಪ್ಪ. ಯಾರೇನು ಮಾಡಕ್ಕಾಗುತ್ತೆ ಅದಕ್ಕೆ? ಅಧಿಕಾರ ಬೇಡ ಅಂದ್ರೆ ಮನೆಯಲ್ಲಿ ಕುಳಿತುಕೊಳ್ಳಲಿ. ಆಗ ಯಾರು ಅವರನ್ನು ಸಾಯಿಸಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ರಾಯರೆಡ್ಡಿ, ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ನನಗೆ ಆ ಸ್ಥಾನ ನೀಡಿದರೂ ನಿಭಾಯಿಸಲು ನಾನು ಸಿದ್ಧ ಎಂದಿದ್ದಾರೆ.