ಕೆಪಿ ನಂಜುಂಡಿ
ಕೆಪಿ ನಂಜುಂಡಿ

ವಿಧಾನ ಪರಿಷತ್ ಗೆ ಮೂವರ ನಾಮ ನಿರ್ದೇಶನ, ಕೆಪಿ ನಂಜುಂಡಿ ಎಂಎಲ್ ಸಿ ಕನಸು ಭಗ್ನ

ಕೊನೆಗೂ ವಿಧಾನಪರಿಷತ್ ನ ನಾಮ ನಿರ್ದೇಶನ ಸದಸ್ಯರ ಪಟ್ಟಿ ಅಂತಿಮಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು....
ಬೆಂಗಳೂರು: ಕೊನೆಗೂ ವಿಧಾನಪರಿಷತ್ ನ ನಾಮ ನಿರ್ದೇಶನ ಸದಸ್ಯರ ಪಟ್ಟಿ ಅಂತಿಮಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಖಂಡರಾದ ಮೋಹನ್ ಕೊಂಡಜ್ಜಿ, ಸಿಎಂ ಲಿಂಗಪ್ಪ ಹಾಗೂ ಮಾಜಿ ಮೇಯರ್ ಪಿಆರ್ ರಮೇಶ್ ಅವರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಿ ರಾಜ್ಯಪಾಲರ ವಜುಭಾಯಿ ವಾಲಾ ಅವರಿಗೆ ಶಿಫಾರಸು ಮಾಡಿದ್ದಾರೆ. ಆದರೆ ಈ ಬಾರಿಯೂ ಕಾಂಗ್ರೆಸ್ ಮುಖಂಡ ಕೆಪಿ ನಂಜುಂಡಿ ಅವರ ಹೆಸರನ್ನು ಕೈಬಿಟ್ಟಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಮೊದಲು ನಾಮ ನಿರ್ದೇಶನ ಸದಸ್ಯರ ಪಟ್ಟಿಯಲ್ಲಿ ಕೆಪಿ ನಂಜುಂಡಿ ಅವರ ಹೆಸರಿತ್ತು. ಆದರೆ ಕೊನೆ ಕ್ಷಣದಲ್ಲಿ ನಂಜುಂಡಿ ಅವರ ಬದಲಿಗೆ ಮಾಜಿ ಮೇಯರ್ ಪಿಆರ್ ರಮೇಶ್ ಅವರ ಹೆಸರನ್ನು ಸಿಎಂ ಸಿದ್ದರಾಮಯ್ಯ ಅವರು ಶಿಫಾರಸು ಮಾಡಿದ್ದಾರೆ.
ಖಾಲಿ ಇದ್ದ ವಿಧಾನ ಪರಿಷತ್ ನ ಈ ಮೂರು ನಾಮ ನಿರ್ದೇಶನ ಸ್ಥಾನಗಳಿಗೆ ಕಾಂಗ್ರೆಸ್ ಮುಖಂಡರು ತೀವ್ರ ಲಾಬಿ ನಡೆಸಿದ್ದರು. ಅಂತಿಮವಾಗಿ ನಿನ್ನೆ ಕಾಂಗ್ರೆಸ್ ಹೈಕಮಾಂಡ್ ನಾಮ ನಿರ್ದೇಶನ ಸದಸ್ಯರ ಪಟ್ಟಿಗೆ ಒಪ್ಪಿಗೆ ಸೂಚಿಸಿದ್ದು, ಇಂದು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿ ಕೆಪಿ ನಂಜುಂಡಿ ಅವರಿಗೆ ಎಂಎಲ್ ಸಿ ಹುದ್ದೆ ಸಿಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೇ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಪರಮೇಶ್ವರ್ ಅವರು ಕೂಡಾ ಭರವಸೆ ನೀಡಿದ್ದರು ಎಂದು ಹೇಳಲಾಗಿದೆ. ಮತ್ತೊಂದೆಡೆ ಕೆಪಿ ನಂಜುಂಡಿಗೆ ಎಂಎಲ್ ಸಿ ಸ್ಥಾನ ತಪ್ಪಿಲು ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಕಾರಣ ಎಂಬ ಆರೋಪ ಕೇಳಿಬಂದಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿ ನಂಜುಂಡಿ ಅವರು, ನಮ್ಮ ಇಡೀ ವಿಶ್ವಕರ್ಮ ಸಮುದಾಯವನ್ನು ಕಾಂಗ್ರೆಸ್ ಪರವಾಗಿ ನಿಲ್ಲಿಸಿದ್ದೇನೆ. ಆದರೆ ನನಗೆ 3ನೇ ಬಾರಿಯೂ ಎಂಎಲ್ ಸಿ ಸದಸ್ಯತ್ವವನ್ನು ತಪ್ಪಿಸಲಾಗಿದೆ ಎಂದು ಕೆಪಿ ನಂಜುಂಡಿ ಖಾಸಗಿ ಚಾನೆಲ್ ವೊಂದರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ. ನಮ್ಮ ಸಮಾಜದ ಸ್ವಾಮೀಜಿಗಳು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದರು. ನಿನ್ನೆ ಸಂಜೆ ಎಂಎಲ್ ಸಿ ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎಂಬ ವಿಷಯ ಕೇಳಿ ಶಾಕ್ ಆಯ್ತು. ನಮ್ಮಂಥ ಸಮಾಜ ಇನ್ನು ಎಷ್ಟು ಅಂತ ಇಂತಹ ನೋವು ಅನುಭವಿಸಬೇಕು ಎಂದು ಪ್ರಶ್ನಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com