ನಗರದ ಬಡ ಮತದಾರರನ್ನು ಸೆಳೆಯಲಿದೆಯೇ ಸಿದ್ದು ಸರ್ಕಾರದ ಸಬ್ಸಿಡಿ ಊಟ?

2018ರ ವಿಧಾನ ಸಭೆ ಚುನಾವಣೆಯಲ್ಲಿ ನಗರದ ಬಡ ಮತದಾರರನ್ನು ಸೆಳೆಯುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಕಡಿಮೆ ಬೆಲೆಗೆ ಬಡವರಿಗೆ...
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on
ಬೆಂಗಳೂರು: 2018ರ ವಿಧಾನ ಸಭೆ ಚುನಾವಣೆಯಲ್ಲಿ ನಗರದ ಬಡ ಮತದಾರರನ್ನು ಸೆಳೆಯುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಕಡಿಮೆ ಬೆಲೆಗೆ ಬಡವರಿಗೆ ಆಹಾರ ನೀಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ನಗರದ ಮತದಾರರನ್ನು ಸೆಳೆಯಲು ಇದೊಂದು ಉತ್ತಮ ಯೋಜನೆ ಎಂಬುದು ಹಲವು ಕಾಂಗ್ರೆಸ್ ನಾಯಕರ ಅಭಿಪ್ರಾಯ.
ರಾಜ್ಯ ವಿಧಾನಸಭೆ ಚುನಾವಣೆ ದೂರ ಏನಿಲ್ಲ,  ಕಾಂಗ್ರೆಸ್ ಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರ ಸ್ಥಾಪಿಸಲು ಶತಾಯಗತಾಯ ಪ್ರಯತ್ನ ಪಡುತ್ತಿದೆ. ಬೆಂಗಳೂರು ನಗರ ವಿಧಾನ ಸಭೆ ಕ್ಷೇತ್ರಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೀಟುಗಳನ್ನು ಪಡೆಯಲು ಹರ ಸಾಹಸ ಪಡುತ್ತಿದೆ. ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ ಪಡೆಯಲು ಕಾಂಗ್ರೆಸ್ ಇಂದಿರಾ ಕ್ಯಾಂಟೀನ್ ಮೊರೆ ಹೋಗಿದೆ.
2015ರ ಬಿಬಿಎಂಪಿ ಚುನಾವಣೆಯಲ್ಲಿ 198 ವಾರ್ಡ್ ಗಳಲ್ಲಿ ಕೇವಲ 76 ವಾರ್ಡ್ ಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಜೊತೆಗೆ ಬೆಂಗಳೂರಿನ ಮೂರು ಲೋಕಸಭೆ ಕ್ಷೇತ್ರಗಳನ್ನು ಕಳೆದು ಕೊಂಡಿತ್ತು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಗರದ  27 ವಿಧಾನ ಸಭೆ ಕ್ಷೇತ್ರಗಳಲ್ಲಿ ಕೇವಲ 13 ಸ್ಥಾನ ಪಡೆಯುವಲ್ಲಿ ಮಾತ್ರ ಸಫಲವಾಯಿತು ಎಂದು ಕಾಂಗ್ರೆಸ್ ನ ಮಾಜಿ ಮೇಯರ್ ಹೇಳಿದ್ದಾರೆ. ನಾವು ಜನರಿಗೆ ಹತ್ತಿರವಾಗಬೇಕು, ಇದಕ್ಕೆ ಉತ್ತಮ ಮಾರ್ಗ ಬಡಜನರಿಗೆ ಕಡಿಮೆ ಬೆಲೆಗೆ ಉತ್ತಮ ಗುಣ ಮಟ್ಟದ ಆಹಾರ ನೀಡುವುದಾಗಿದೆ. ಇದಕ್ಕಾಗಿ ಇಂದಿರಾ ಕ್ಯಾಂಟೀನ್ ನಮಗೆ ಸಹಾಯ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಈ ಪ್ರಯತ್ನ ಕಾಂಗ್ರೆಸ್ ಪಕ್ಷಕ್ಕೆ ಆರಂಭದಲ್ಲಿ ಸಹಾಯಕವಾಗಬಹುದು, ಆದರೆ ಜನರು ಸರ್ಕಾರ ಇಂದಿರಾ ಕ್ಯಾಂಟೀನ್ ನಲ್ಲಿ ನೀಡುವ ಆಹಾರದಲ್ಲಿ ಹೈಜೆನಿಕ್, ಗುಣಮಟ್ಟ  ಸೇರಿದಂತೆ ಇತರ ಅಂಶಗಳ ಬಗ್ಗೆ ಅಳೆದು ತೂಗಲಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಡಾ. ಸಂದೀಪ್ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ. 
ಇಂದಿನ ದಿನಗಳಲ್ಲಿ ಇಂದಿರಾ ಗಾಂಧಿಗಿಂತ ನೆಹರೂ ಅವರನ್ನು ಸ್ಮರಿಸುವ ಅವಶ್ಯಕತೆಯಿದೆ. ಇಂದಿರಾ ಗಾಂಧಿ ಅವರನ್ನು ಹೆಚ್ಚಿನ ಜನ ಮರೆತಿದ್ದಾರೆ. ಸಬ್ಸಿಡಿ ಊಟ ರಾಜಕೀಯವಾಗಿ ಲಾಭ ತರಬಹುದು ಆದರೆ ಅದು ದೊಡ್ಡ ಮಟ್ಟದ್ದಾಗಿರುವುದಿಲ್ಲ ಎಂದು ಪ್ರೊ.ಮುಜಾಫರ್ ಅಸಾದಿ ಹೇಳಿದ್ದಾರೆ.
ಇದು ಕಾಂಗ್ರೆಸ್ ನ ಚುನಾವಣಾ ಪೂರ್ವಪ್ರಯೋಗವಾಗಿದೆ. ವಿಧಾನಸಭೆ ಚುನಾವಣೆ ಗಮದಲ್ಲಿರಿಸಿಕೊಂಡು ಇದನ್ನೆಲ್ಲಾ ಮಾಡುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕು, ಇಂದಿರಾ ಕ್ಯಾಂಟೀನ್ ನಲ್ಲಿ ನೀಡುವ ಆಹಾರದ ಕ್ವಾಲಿಟಿ ಮತ್ತು ಕ್ವಾಂಟಿಟಿ ಆಧಾರದ ಮೇಲೆ ನಿಂತಿದೆ ಎಂದು ಬಿಜೆಪಿ ಹಿರಿಯ ಮುಖಂಡ ಸುರೇಶ್ ಕುಮಾರ್ ಹೇಳಿದ್ದಾರೆ.
ಸುರೇಶ್ ಕುಮಾರ್ ಕಾದು ನೋಡಲಿ, ಚುನಾವಣೆಗಾಗಿ ಸರ್ಕಾರ ಇದನ್ನು ಮಾಡಲಿಲ್ಲ, ಬಡ ಜನರಿಗಾಗಿ ನಾವು ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೇವೆ, ಬಡ್ಜೆಟ್ ನಲ್ಲಿ ನಾವು ಇದನ್ನು ಘೋಷಿಸಿದ್ದೆವು, ಈಗ ಅದರ ಅನುಷ್ಠಾನ ಮಾಡುತ್ತಿದ್ದೇವೆ,  ನಾವು ಬಿಜೆಪಿ ನಾಯಕರ ರೀತಿಯಲ್ಲ, ಬಿಜೆಪಿ ನಾಯಕರು ಯೋಜನೆಗಳನ್ನು ಘೋಷಿಸುತ್ತಾರೆ, ಆದರೆ ಯಾವುದನ್ನು ಜಾರಿಗೆ ತರುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸುರೇಶ್ ಕುಮಾರ್ ಗೆ ಎದಿರೇಟು ನೀಡಿದ್ದಾರೆ.
ಆರಂಭದಲ್ಲಿ ನಮ್ಮ ಕ್ಯಾಂಟೀನ್ ಎಂಬ ಹೆಸರಿಡಬೇಕು ಎಂದಿತ್ತು, ಆದರೆ ನಂತರ ಕಾಂಗ್ರೆಸ್ ನಾಯಕರು ಇಂದಿರಾ ಕ್ಯಾಂಟೀನ್ ಎಂದು ಹೆಸರಿಡಲು ಸೂಚಿಸಿದರು ಎಂದು ಹೇಳಿದ್ದಾರೆ.
ನಮಗೆ ಇಷ್ಟವಿರಲಿ ಇಲ್ಲದಿರಲಿ, ಬೆಂಗಳೂರು ನಗರದ ಬಡ ಜನತೆಗೆ ಇಂದಿರಾ ಗಾಂಧಿ  ಇಂದಿಗೂ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ, ಇಂದಿಗೂ ಹಲವು ಜನ ಇಂದಿರಾ ಗಾಂದಿಗಾಗಿ ಕಾಂಗ್ರೆಸ್ ಗೆ ಮತ ಹಾಕುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ನಗರದ ಬಡ ಜನರನ್ನು ಗುರಿಯಾಗಿಸಿಕೊಂಡು ತೆರೆಯಲಾಗಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ರಾಜ್ಯದ ಬಡವರಿಗಾಗಿ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿತು. ಆದರೆ ಸರ್ಕಾರ  ಇಂದಿರಾ ಕ್ಯಾಂಟೀನ್ ಹೆಸರಿಟ್ಟಿರುವುದಕ್ಕೆ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ. ಇಂದಿರಾ ಗಾಂಧಿ ಅವರ 100 ನೇ ಜನ್ಮ ಶತಮಾನೋತ್ಸವ ಅಂಗವಾಗಿ ಇಂದಿರಾ ಕ್ಯಾಂಟೀನ್ ಎಂದು ಹೆಸರಿಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಒಟ್ಟಾರೆ ನಗರದ ಬಡ ಜನರಿಗೆ ಮೂರು ಹೊತ್ತು ಊಟ ನೀಡುವ ಮೂಲಕ ಸಿದ್ದರಾಮಯ್ಯ  ತಮ್ಮ ಫೇಸ್ ವಾಲ್ಯೂ ಹೆಚ್ಚಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com