ರಾಜಕೀಯ ದ್ವೇಷದಿಂದ ಯಡಿಯೂರಪ್ಪ ವಿರುದ್ಧ ಕೇಸ್ ದಾಖಲು: ಬಿಜೆಪಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ....
ಬಸವರಾಜ್ ಬೊಮ್ಮಾಯಿ
ಬಸವರಾಜ್ ಬೊಮ್ಮಾಯಿ
ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬಸವರಾಜ್ ಬೊಮ್ಮಾಯಿ ಅವರು, ರಾಜಕೀಯ ದ್ವೇಷದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಿಂದ ತನಿಖೆ ನಡೆಸಲಾಗುತ್ತಿದೆ ಎಂದು ಶನಿವಾರ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ಶಿವರಾಂ ಕಾರಂತ್ ಲೇಔಟ್ ಡಿನೋಟಿಫೈ ಮಾಡಿಲ್ಲ. 3,546 ಎಕರೆ ಭೂಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ರೈತರ ವಿರೋಧ ವ್ಯಕ್ತಪಡಿಸಿದ ನಂತರ ಈ ಪೈಕಿ 257 ಎಕರೆಯನ್ನು ಪ್ರಾಥಮಿಕ ಅಧಿಸೂಚನೆಯಿಂದ ಕೈಬಿಡಲಾಗಿತ್ತು ಅಷ್ಟೆ. ಡಿನೋಟಿಫೈ ಮಾಡಿಲ್ಲ. ಒಂದು ವೇಳೆ ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ಡಿನೋಟಿಫೈ ಮಾಡಿದರೆ ಅದು ತಪ್ಪಾಗುತ್ತಿತ್ತು ಎಂದು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಸಿಐಡಿಯಲ್ಲಿರುವ ಪ್ರಕರಣವನ್ನು ಈಗ ದಿಢೀರ್ ಎಸಿಬಿಯಿಂದ ತನಿಖೆ ನಡೆಸುತ್ತಿರುವುದನ್ನು ಗಮನಿಸಿದರೆ ರಾಜಕೀಯ ದ್ವೇಷ ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಮಾಜಿ ಸಚಿವರು ತಿಳಿಸಿದ್ದಾರೆ. ಅಲ್ಲದೆ ಇದರ ವಿರುದ್ಧ ತಾವು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
ಡಾ.ಡಿ.ಅಯ್ಯಪ್ಪ ಅವರು ಸಲ್ಲಿಸಿದ ದೂರಿನ ಅನ್ವಯ ಎಸಿಬಿ ಯಡಿಯೂರಪ್ಪ ವಿರುದ್ಧ ಎರಡು ಅಕ್ರಮ ಡಿನೋಟಿಫಿಕೇಶನ್ ಪ್ರಕರಣ ದಾಖಲು ಮಾಡಿದೆ. ಅಲ್ಲದೆ ವಿಚಾರಣೆಗೆ ಹಾಜರಾಗುವಂತೆಯೂ ಸಮನ್ಸ್ ನೀಡಲಾಗಿತ್ತು. ಆದರೆ, ಯಡಿಯೂರಪ್ಪ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಲು ಸಮಯ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com