ಕರ್ನಾಟಕದಲ್ಲಿ ಮೋದಿ ಮ್ಯಾಜಿಕ್ ನಡೆಯೋಲ್ಲ: ಸಿಎಂ ಸಿದ್ದರಾಮಯ್ಯ ಸಂದರ್ಶನ

ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ...
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಅಧಿಕಾರಕ್ಕೆ ಬಂದ ನಂತರ 2013 ರಲ್ಲಿ ನೀಡಿದ್ದ ಭರವಸೆಗಳನ್ನು ಬಹುತೇಕ ಈಡೇರಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದು ಐದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಅವರು ಸಂದರ್ಶನ ನೀಡಿದ್ದಾರೆ, ಅದರ ಎಕ್ಸ್ ಕ್ಲೂಸಿವ್ ಮಾಹಿತಿ ಇಲ್ಲಿದೆ. ತಮ್ಮ ಸರ್ಕಾರದ ಸಾಧನೆಗಳನ್ನು ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಜನರಿಗೆ ತಿಳಿಸಿ, ತಮ್ಮ ಇಮೇಜ್ ಅನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವ ಸಿಎಂ ಸಿದ್ದರಾಮಯ್ಯ, 2018ರ ವಿಧಾನ ಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ರಣತಂತ್ರ ಎಣೆಯುತ್ತಿದ್ದಾರೆ.
ಪ್ರ: ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ  ಯಡಿಯೂರಪ್ಪ ವಿರುದ್ಧ ಎಸಿಬಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ನಿಮ್ಮ ಮೇಲಿದೆಯಲ್ಲ?
ಉ:  ಕೆಲ ಜನರಿಂದ ಎಸಿಬಿಗೆ ದೂರು ದಾಖಲಾಗಿದೆ, ಹಾಗಾಗಿ ಅವರು ಎಫ್ ಐಆರ್ ದಾಖಲಿಸಿದ್ದಾರೆ. ಇದರಲ್ಲಿ ಎಸಿಬಿ ದುರ್ಬಳಕೆ ಮಾಡಿಕೊಳ್ಳುವ ಪ್ರಶ್ನೆ ಎಲ್ಲಿದೆ, ಸರ್ಕಾರಕ್ಕೂ ಈ ಪ್ರಕರಣಕ್ಕೂ ಸಂಬಂಧವಿಲ್ಲ,  ಅನಾವಶ್ಯಕವಾಗಿ ಬಿಜೆಪಿ ಸರ್ಕಾರವನ್ನು ಮಧ್ಯ ಎಳೆದು ತರುತ್ತಿದೆ.
ಪ್ರ: ಇದು ಬಹಳ ಹಳೇಯ ಕೇಸ್, ಆದರೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದ ನಂತರ ಕೇಸ್ ದಾಖಲಾಗಿದೆಯಲ್ಲ?
: ಹಳೇಯ ಪ್ರಕರಣಗಳ ವಿರುದ್ಧ ಎಫ್ ಐಆರ್ ದಾಖಲಾಗಬಾರದೆಂಬ ಕಾನೂನು ಇದೆಯೇ? ಹಳೇಯ ಪ್ರಕರಣ ಎಂದ ಮಾತ್ರಕ್ಕೆ ತನಿಖೆ ಆಗಬಾರದೆಂಬ ಅರ್ಥವೇ, ಸದಾನಂದ ಗೌಡ ಸಿಎಂ ಆಗಿದ್ದ ವೇಳೆ ಸದನದಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ಸಿಐಡಿ ತನಿಖೆಗೆ ಅವರೇ ನಿರ್ಧರಿಸಿದ್ದರು. ಯಡಿಯೂರಪ್ಪ ಅವರೇ ಸದಾನಂದಗೌಡ ಅವರನ್ನು ಸಿಎಂ ಮಾಡಿದ್ದು. ಅದು ಅಧಿಕಾರದ ದುರುಪಯೋಗವೇ. ಆದಾಯ ತೆರಿಗೆ ಇಲಾಖೆ ದಾಳಿಗೂ ಎಸಿಬಿ ಕ್ರಮಕ್ಕೂ ಯಾವುದೇ ಸಂಬಂಧವಿಲ್ಲ,  ನಾವು ದ್ವೇಷ ರಾಜಕಾರಣ ಮಾಡುವುದಿಲ್ಲ.
ಪ್ರ:  ಬಿಜೆಪಿ ಐಟಿ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆಯೇ?
ಉ:  ಮೇಲ್ನೋಟಕ್ಕೆ ಹಾಗೆ ಅನಿಸುತ್ತಿದೆ. ಇಂಧನ ಸಚಿವ ಶಿವಕುಮಾರ್ ಅವರನ್ನು ಮೂರು ದಿನಗಳ ಕಾಲ ಗೃಹ ಬಂಧನದಲ್ಲಿಡಲಾಗಿತ್ತು, ಅವರ ಫೋನ್ ಕಿತ್ತು ಕೊಳ್ಳಲಾಗಿತ್ತು, ಯಾರೋಬ್ಬರನ್ನು ಮನೆಯ ಒಳಗೆ ಹೋಗಲು ಬಿಡಲಿಲ್ಲ, ಯಾರ ಜೊತೆಗೂ ಮಾತನಾಡಲು ಅವಕಾಶ ನೀಡಲಿಲ್ಲ, ಒಬ್ಬ ಸಚಿವರಾಗಿ ಅವರಿಗೆ ಕೆಲವೊಂದು ಸೌಲಭ್ಯ ಅನುಭವಿಸುವ ಸ್ವಾತಂತ್ರ್ಯವಿಲ್ಲವೇ?, ರೆಸಾರ್ಟ್ ನಲ್ಲಿದ್ದ ಅವರನ್ನು ಮನೆಗೆ ಕರೆತಂದು ವಿಚಾರಣೆ ನಡೆಸಲಾಯಿತು, ಶಿವಕುಮಾರ್ ರೆಸಾರ್ಟ್ ನಿಂದ ಮನೆಗೆ ಬರುವವರೆಗೂ ಐಟಿ ಅಧಿಕಾರಿಗಳು ಕಾಯೂಬೇಕಾಗಿತ್ತು. ನಾನು ಐಟಿ ದಾಳಿ ವಿರೋಧಿಯಲ್ಲ, ಆದರೆ ಅವರು ದಾಳಿ ಮಾಡಿದ ಕ್ರಮ ಸರಿಯಲ್ಲ. ಕಳೆದ ಎರಡು ವರ್ಷಗಳಿಂದ ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ.
ಪ್ರ: ಡಿ.ಕೆ ಶಿವಕುಮಾರ್ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿದೆಯಲ್ಲ?
ಉ: ಅವರು ಏಕೆ ರಾಜಿನಾಮೆ ನೀಡಬೇಕು, ಅವರು ತಪ್ಪಿತಸ್ಥರು ಎಂಬುದು ಇನ್ನೂ ನಿರ್ಧಾರವಾಗಿಲ್ಲ, ಯಾವುದೋ ವ್ಯಕ್ತಿಯೊಬ್ಬರ ಮೇಲೆ ಐಟಿ ದಾಳಿ ನಡೆಯಿತು ಎಂಬ ಮಾತ್ರಕ್ಕೆ ಅವರನ್ನು ತಪ್ಪಿತಸ್ಥರು ಎಂದು ಹೇಳಲಾಗದು, ಯಡಿಯೂರಪ್ಪ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ, ಹೀಗಿದ್ದರೂ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಪ್ರ: ಅವಧಿಗೂ ಮುನ್ನ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆಯೇ?
ಉ: ಯಾವುದೇ ಕಾರಣಕ್ಕೂ ಅವಧಿಗೂ ಮುನ್ನ ಚುನಾವಣೆ ನಡೆಯುವುದಿಲ್ಲ, ನಿಗದಿಯಂತೆ ಇನ್ನು ಆರು ಅಥವಾ ತಿಂಗಳ ನಂತರ ಚುನಾವಣೆ ನಡೆಯಲಿದೆ. ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡುವುದು ಅಥವಾ ಮೋದಿ ಕರ್ನಾಟಕದಲ್ಲಿ ಪ್ರಚಾರ ನಡೆಸುವುದರಿಂದ ಬಿಜೆಪಿ ವರ್ಚಸ್ಸು ಹೆಚ್ಚಲು ಸಾಧ್ಯವಿಲ್ಲ.
ಪ್ರ: ಮುಂದಿನ ವಿಧಾನಸಭೆ ಚುನಾವಣೆಯಲ್ಲ ಗೆಲ್ಲುವ ಆತ್ಮವಿಶ್ವಾಸವಿದೆಯೇ?
ಉ: ರಾಜ್ಯದ ಜನತೆ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಕಳೆದ ಚುನಾವಣೆ ವೇಳೆ ನೀಡಿದ್ದ ಭರವಸೆನಗಳನ್ನು ಸರ್ಕಾರ ಈಡೇರಿಸಿದೆ. ರಾಜ್ಯದ ಯಾವುದೇ ಭಾಗದಲ್ಲಿಯೂ ಆಡಳಿತ ವಿರೋಧಿ ಅಲೆಯಿಲ್ಲ.
ಪ್ರ: ಮೆಟ್ರೋ ಬೋರ್ಡ್ ಗಳಲ್ಲಿ ಹಿಂದಿ ಬಳಕೆ, ರಾಜ್ಯಕ್ಕೆ ಪ್ರತ್ಯೇಕ ಧ್ವಜ ದಂತ ಪ್ರಾದೇಶಿಕ ಭಾವನೆಯ ವಿಷಯಗಳನ್ನು ಚುನಾವಣೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದೀರಾ?
: 1966 ರಿಂದ ರಾಜ್ಯದಲ್ಲಿ ಅನಧಿಕೃತವಾಗಿ ಧ್ವಜ ಬಳಸಿಕೊಳ್ಳಲಾಗುತ್ತಿದೆ, ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರ ಪಾಟೀಲ ಪುಟ್ಟಪ್ಪ ನನಗೆ ಪತ್ರ ಬರೆದು ಅದನ್ನು ಅಧಿಕೃತ ಧ್ವಜವನ್ನಾಗಿ ಮಾಡುವಂತೆ ಕೋರಿದ್ದರು. ಅದಾದ ನಂತರ ನಾನು ಸಮಿತಿ ರಚಿಸಿದ್ದೆ, ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದಬಾರದು ಎಂದು ಸಂವಿಧಾನ ಎಲ್ಲಿಯೂ ಹೇಳಿಲ್ಲ ಎಂಬುದು ನನ್ನ ಅಭಿಪ್ರಾಯ. ರಾಷ್ಟ್ರ ಧ್ವಜ ಯಾವಾಗಲೂ ಹಾರಾಡುತ್ತಿರುತ್ತದೆ ಅದರ ಕೆಳಗೆ ನಮ್ಮ ರಾಜ್ಯ ಧ್ವಜವನ್ನು ಹಾರಿಸಬಹುದು.
ಹಿಂದಿ ಹೇರಿಕೆ ವಿರುದ್ಧ ನನ್ನ ನಿಲುವು ಸ್ಪಷ್ಟವಾಗಿದೆ, ಹಿಂದಿ ರಾಷ್ಟ್ರೀಯ ಭಾಷೆಯಲ್ಲ, ಅದೊಂದು ಅಧಿಕೃತ ಭಾಷೆ ಅಷ್ಟೆ. ಮೆಟ್ರೋ ಬೋರ್ಡ್ ಗಳಲ್ಲಿ ಹಿಂದಿ ಬಳಕೆ ವಿರುದ್ಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ನಂತರ ನಾನು ಕೇಂದ್ರಕ್ಕೆ ಪತ್ರ ಬರೆದು ಬಲವಂತವಾಗಿ ಹಿಂದಿ ಭಾಷೆ ಹೇರಿಕೆ ಮಾಡದಂತೆ ಮನವಿ ಮಾಡಿದ್ದೇನೆ.
ಪ್ರ:  ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ದಶಕಗಳ ಹಿಂದಿನ ಬೇಡಿಕೆ, ಯಡಿಯೂರಪ್ಪ ಅವರನ್ನ ಬಲಹೀನಗೊಳಿಸಲು ಬಿಜೆಪಿ ಬೆಂಬಲಿತ ಲಿಂಗಾಯತ ಸಮುದಾಯ ಒಡೆಯಲು ಕಾಂಗ್ರೆಸ್ ಈ ವಿಷಯ ಬಳಸಿಕೊಳ್ಳುತ್ತಿದೆಯೇ?
ಉ:  ಅದೊಂದು ಆರೋಪ ಅಷ್ಟೆ, ವೀರಶೈವ ಮಹಾಸಭಾಕೆಲ ದಿನಗಳ  ಹಿಂದೆ ನನ್ನ ಭೇಟಿ ಮಾಡಿ ಪ್ರತ್ಯೇಕ ಧರ್ಮಕ್ಕಾಗಿ ಮನವಿ ಸಲ್ಲಿಸಿದರು. ಜೊತೆಗೆ ಅದಾದ ನಂತರ ಮಾತೆ ಮಹಾದೇವಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವಂತೆ ನನಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಒತ್ತಾಯದ ಬಗ್ಗೆ ನಾನು ಪರಿಶೀಲಿಸುವುದಾಗಿ ಹೇಳಿದ್ದೆ. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಈ ಪ್ರಕರಣ ಸಂಬಂಧ ನಮ್ಮ ಸರ್ಕಾರದ ಯಾವುದೇ ಭಾಗವಹಿಸುವಿಕೆಯಿಲ್ಲ.
ಪ್ರ: ರಾಜ್ಯ ಕಾಂಗ್ರೆಸ್ ಮುಖಂಡರು ಹೈಕಮಾಂಡ್ ಗೆ ನಿರಂತರವಾಗಿ ಹಣ ಸಂದಾಯ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ಆರೋಪವಿದೆಯಲ್ಲ?
ಉ: ಸುಳ್ಳು ಹೇಳುತ್ತಿರುವವರನ್ನು ಜನ ನಂಬುವುದಿಲ್ಲ. ಅವರ ಬಳಿ ನನ್ನ ವಿರುದ್ಧ ಯಾವುದಾದರೂ ದಾಖಲಾತಿಗಳಿವೆಯೇ, ನಾನು ಕೂಡ ಪ್ರಧಾನಿ ಮೋದಿ ವಿರುದ್ಧ ಸಾವಿರ ಆರೋಪ ಮಾಡುತ್ತೇನೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದರೆ, ನಾನು ಕೂಡ ಅವರ ವಿರುದ್ಧ ಸುಳ್ಳು ಆರೋಪ ಮಾಡಬಹುದು, ಆದರೆ ಅದು ನನ್ನ ಸಂಸ್ಕೃತಿಯಲ್ಲ.
ಪ್ರ: ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಅಮಿತ್ ಶಾ ನಿರ್ಧರಿಸಿದ್ದಾರಲ್ಲ?
ಉ: ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಅಮಿತ್ ಶಾ ಅಥವಾ ಬಿಜೆಪಿ ನಿರ್ಧರಿಸಲು ಸಾಧ್ಯವಿಲ್ಲ, ರಾಜ್ಯದ ಜನತೆ ನಿರ್ಧರಿಸುತ್ತಾರೆ, ರಾಜ್ಯದ ಜನತೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕೆಂದು ನಿರ್ಧರಿಸಿದ್ದಾರೆ.
ಪ್ರ: ಮೋದಿ ಅವರ ಪ್ರಬಲ ವರ್ಚಸ್ಸಿಗೆ ವಿರೋಧವಾಗಿ ನೀವು ಇಂದಿರಾ ಗಾಂಧಿ ಹೆಸರು ಬಳಕೆ ಮಾಡುತ್ತಿದ್ದೀರಾ ಎಂದು ಕೆಲವು ವಿಮರ್ಶಕರ ಅಭಿಪ್ರಾಯವಾಗಿದೆಯಲ್ಲ?
ಉ: ಇದು ಇಂದಿರಾಗಾಂಧಿ ಅವರ ಜನ್ಮ ಶತಮಾನೋತ್ಸವದ ವರ್ಷ. ಹೀಗಾಗಿ ಕ್ಯಾಂಟೀನ್ ಗಳಿಗೆ ಅವರ ಹೆಸರು ನಾಮಕರಣ ಮಾಡಿದ್ದೇವೆ, ಬಜೆಟ್ ನಲ್ಲಿ ನಮ್ಮ ಕ್ಯಾಂಟೀನ್ ಎಂದು ಘೋಷಿಸಿದ್ದೆ. ನಾವು 385 ಮೊರಾರ್ಜಿ ದೇಸಾಯಿ ಶಾಲೆಗಳ ಹೆಸರು ಬದಲಾವಣೆ ಮಾಡುತ್ತಿಲ್ಲ, ಹೊಸದಾಗಿ ಸ್ಥಾಪನೆಯಾಗುತ್ತಿರುವ 100 ಶಾಲೆಗಳಿಗೆ ಇಂದಿರಾ ಗಾಂಧಿ ಹಾಗೂ 125 ಶಾಲೆಗಳಿಗೆ ಅಂಬೇಡ್ಕರ್ ಹೆಸರು ನಾಮಕರಣ ಮಾಡಲು ನಿರ್ಧರಿಸಿದ್ದೇವೆ.
ಪ್ರ: ನಿಮ್ಮನ್ನು ರಾಜ್ಯದ ಪ್ರಬಲ ಕಾಂಗ್ರೆಸ್ ನಾಯಕ ಎಂದು ಹೇಳಲಾಗುತ್ತಿದೆ, ರಾಷ್ಟ್ರ ರಾಜಕಾರಣದಲ್ಲಿಯೂ ನಿಮ್ಮ ಪಾತ್ರವಿದೆಯೇ?
ಉ: ನನ್ನ ಗಮನವೇನಿದ್ದರೂ ರಾಜ್ಯ ರಾಜಕೀಯಕ್ಕೆ ಮಾತ್ರ ಸೀಮಿತ, 2018ರ ವಿಧಾನಸಭೆ ಚುನಾವಣೆ ನಂತರ ನೋಡೋಣ.
ಪ್ರ: ನಿಮ್ಮ ನಾಯಕತ್ವದಲ್ಲೇ ಕಾಂಗ್ರೆಸ್ ಮುಂದಿನ ಚುನಾವಣೆ ಎದುರಿಸಲಿದೆ ಎಂಬುದು ತೀರ್ಮಾನವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಮುಂದಿನ ಸಿಎಂ ಆಗುತ್ತೀರಾ?
ಉ: ಇದನ್ನು ಕಾಂಗ್ರೆಸ್ ಪಕ್ಷ ಮತ್ತು ಶಾಸಕರು ನಿರ್ಧರಿಸುತ್ತಾರೆ.
ಪ್ರ: ಜೆಡಿಎಸ್ ಜೊತೆ ಚುನಾವಣಾ ಪೂರ್ವ ಅಥವಾ ಚುನಾವಣೋತ್ತರ ಮೈತ್ರಿ ಸಾಧ್ಯತೆಯಿದೆಯೇ?
ಉ: ಯಾವುದೇ ಪಕ್ಷದೊಂದಿಗೆ ಚುನಾವಣಾ ಪೂರ್ವ ಅಥವಾ ಚುನಾವಣೆ ನಂತರದ ಮೈತ್ರಿಯಿಲ್ಲ, ನಮ್ಮ ಸ್ವಂತ ಬಲದ ಮೇಲೆ ನಾವು ಚುನಾವಣೆಗೆ ಸ್ಪರ್ಧಿಸಲಿದ್ದೇವೆ. 
ಪ್ರ: ಆಡಳಿತದ ಕೊನೆಯ ತಿಂಗಳುಗಳಲ್ಲಿ ನಿಮ್ಮ ಆದ್ಯತೆಯ ವಿಷಯಗಳಾವುವು?
ಉ: ನಮ್ಮ ಆದ್ಯತೆ ಸ್ಪಷ್ಟವಾಗಿದೆ ಮತ್ತು ಸರಳವಾಗಿದೆ. ಜನರ ಬಳಿ ನಮ್ಮ ಸರ್ಕಾರದ ಸಾಧನೆ ಮತ್ತು ಕಾರ್ಯಕ್ರಮಗಳನ್ನು ಕೊಂಡೊಯ್ಯುತ್ತೇವೆ, ಇವು ನಮ್ಮ ಭರವಸೆಗಳು, ಇವು ನಮ್ಮ ಸಾಧನೆಗಳು ಎಂಬುದನ್ನು ತಿಳಿಸುತ್ತೇವೆ. ನಮ್ಮ ಮಾತನ್ನು ನಾವು ಉಳಿಸಿಕೊಂಡಿದ್ದೇವೆ, ಮತ್ತೊಮ್ಮೆ ಹರಸುವಂತೆ ನಾವು ಜನರಲ್ಲಿ ಕೋರುತ್ತೇವೆ, ಚಾಮರಾಜನಗರ ಮತ್ತು ಗುಂಡ್ಲುಪೇಟೆ ವಿಧಾನಸಭೆ ಉಪಚುನಾವಣೆ ಫಲಿತಾಂಶ 2018ರ ವಿಧಾನಸಭೆ ಚುನಾವಣೆಯಲ್ಲೂ ಬರಲಿದೆ.
ಪ್ರ: ಸಚಿವ ಸಂಪುಟ ವಿಸ್ತರಣೆ ಯಾವಾಗ? ಮುಂದಿನ ಗೃಹ ಸಚಿವ ಯಾರು?
: ಈಸಂಬಂಧ ನಾನು ಈಗಾಗಲೇ  ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿದ್ದೇನೆ, ಮುಂದಿನ ವಾರದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ. ಯಾರಿಗೆ ಯಾವ ಖಾತೆ ನೀಡಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ.
ಪ್ರ: ಬೆಂಗಳೂರಿನ ಜನ ವಿಐಪಿ ಸಂಸ್ಕೃತಿ ಬಗ್ಗೆ ಬೇಸರ ಹೊಂದಿದ್ದಾರೆ? ವಿಐಪಿ ವಾಹನ ತೆರಳುವಾಗ ಜನಸಾಮಾನ್ಯರ ವಾಹನಗಳನ್ನು ನಿಲ್ಲಿಸುವುದರ ಬಗ್ಗೆ ಅಸಮಾಧಾನವಿದೆಯಲ್ಲ?
ಉ: ವಿಐಪಿ ವಾಹನಗಳು ಸಂಚರಿಸುವ ವೇಳೆ ಆ್ಯಂಬುಲೆನ್ಸ್  ತಡೆಯಬೇಡಿ ಎಂದು ನಾನು ಸಂಚಾರಿ ಪೊಲೀಸರಿಗೆ ಸಂದೇಶ ನೀಡಿದ್ದೇನೆ. ಸಾಮಾನ್ಯವಾಗಿ ಗವರ್ನರ್, ಮುಖ್ಯಮಂತ್ರಿ ಮತ್ತು ಸಚಿವರುಗಳು ಪ್ರಯಾಣಿಸುವಾಗ ಅವರ ವಾಹನಗಳಿಗಾಗಿ ಪೊಲೀಸರು ದಾರಿ ಮಾಡಿಕೊಡುತ್ತಾರೆ. ನಾನು ಅಧಿಕಾರಕ್ಕೆ ಬಂದಾಗಿನಿಂದ ಇದು ಆರಂಭವಾಗಿಲ್ಲ,  ಬಹಳ ಹಿಂದಿನಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. 
ಪ್ರ: ಪದೇ ಪದೇ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಸರ್ಕಾರದ ಆಡಳಿತ ಯಂತ್ರಕ್ಕೆ ಅಡ್ಡಿ ಉಂಟು ಮಾಡುವುದಿಲ್ಲವೇ?
ಉ: ಯಾವುದೇ ಅಧಿಕಾರಿಗಳ  ವರ್ಗಾವಣೆ ಮಾಡುವಾಗ ರಾಜಕೀಯ ಉದ್ದೇಶವಿರುವುದಿಲ್ಲ, ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಕೆಲವೊಮ್ಮೆ ವರ್ಗಾವಣೆ ಅನಿವಾರ್ಯವಾಗುತ್ತದೆ, ವರ್ಗಾವಣೆಯಿಂದ ವ್ಯವಸ್ಥೆಯಲ್ಲಿ ಅನಿಶ್ಚಿತತೆ ಉಂಟಾಗಲು ನಾನು ಅವಕಾಶ ನೀಡಿಲ್ಲ.
ಪ್ರ: ಬೆಂಗಳೂರು ಒಂದು ನಗರ ವ್ಯವಸ್ಥೆ, ಸಿಲಿಕಾನ್ ಸಿಟಿಯನ್ನು ವಾಸಯೋಗ್ಯ ನಗರವನ್ನಾಗಿಸಲು ಸರ್ಕಾರ ಏನೇನು ಕ್ರಮ ಕೈಗೊಂಡಿದೆ?
ಉ: ಭಾರತದಲ್ಲೇ ಬೆಂಗಳೂರು ನಗರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ದ್ವಿಚಕ್ರ ವಾಹನಗಳಿವೆ. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ.  ರಸ್ತೆಗಳ ಅಗಲೀಕರಣ, ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ಕ್ರಮ ಕೈಗೊಂಡಿದ್ದೇವೆ. ಬಸ್ ಗಳ ಸಂಖ್ಯೆ ಏರಿಸಲಾಗಿದೆ, ಬಜೆಟ್ ನಲ್ಲಿ ಅನುದಾನ ಕೂಡ ಏರಿಕೆ ಮಾಡಲಾಗಿದೆ. ಮೊದಲನೇ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದ್ದು, ಎರಡನೇ ಹಂತದ ಮೆಟ್ರೋ ಕಾಮಗಾರಿ 2020ರ ವೇಳೆಗೆ ಪೂರ್ಣಗೊಳ್ಳಲಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೇ ಬೆಂಗಳೂರು ಅಭಿವೃದ್ದಿ ಕಡೆಗೆ ಗಮನ ಹರಿಸುತ್ತೇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com