ಮೈಸೂರು: ಹಿಂದೂಗಳು ಆಚರಿಸುವ ಹಬ್ಬಗಳು ಹಾಗೂ ಮೆರವಣಿಗೆಗಳನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಾವಣನಂತಾಗಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಟೀಕಿಸಿದ್ದಾರೆ.
ರಾಜ್ಯದಲ್ಲಿ ಟಿಪ್ಪು ಜಯಂತಿ, ಈದ್ ಮಿಲಾದ್ ಮೆರವಣಿಗೆಗೆ ಅನುಮತಿ ನೀಡುವ ಸರ್ಕಾರವು ಹನುಮ ಜಯಂತಿ ಮೆರವಣಿಗೆಗೆ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಕೋಮು ಸೌಹಾರ್ದತೆಯನ್ನು ಕದಡಲು ಮುಖ್ಯಮಂತ್ರಿ ಅವರೇ ಮುಖ್ಯ ಕಾರಣ. ಹಿಂದೂಗಳ ಹಬ್ಬಗಳ ಆಚರಣೆಗೆ ಸಿದ್ದರಾಮಯ್ಯನವರು ರಾವಣನಂತೆ ತಯಾರಾಗಿದ್ದಾರೆ. ಹುಣಸೂರಿನಲ್ಲಿ ಹನುಮ ಜಯಂತಿಗೆ ಅನುಮತಿ ನೀಡದಿರುವುದು ಮುಖ್ಯಮಂತ್ರಿಗಳ ಸರ್ವಾಧಿಕಾರಿ ಧೋರಣೆಯೇ ಕಾರಣ ಎಂದರು.
ಇನ್ನು ಹನುಮ ಜಯಂತಿ ಮೆರವಣಿಗೆ ನಡೆಸುತ್ತಿದ್ದವರನ್ನು ಬಂಧಿಸಲಾಗಿದೆ. ಅದರಲ್ಲೂ ಸಂಸದ ಪ್ರತಾಪ್ ಸಿಂಹ ಅವರ ಬಂಧನವು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಈ ಬಗ್ಗೆ ಸಂಸತ್ ನ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.