ಸಿಎಂ ಸಿದ್ದರಾಮಯ್ಯ ಸ್ಟೀಲ್‌ಫ್ಲೈ ಓವರ್ ಗಾಗಿ 65 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ: ಬಿಎಸ್ ವೈ

ನಿನ್ನೆಯಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಹೈಕಮಾಂಡ್‌ಗೆ ಒಂದು ಸಾವಿರ ಕೋಟಿ ರುಪಾಯಿ ಕೊಟ್ಟು ತಮ್ಮ ಕುರ್ಚಿ....
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ನಿನ್ನೆಯಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಹೈಕಮಾಂಡ್‌ಗೆ ಒಂದು ಸಾವಿರ ಕೋಟಿ ರುಪಾಯಿ ಕೊಟ್ಟು ತಮ್ಮ ಕುರ್ಚಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ಅವರು ಭಾನುವಾರ ಸಿಎಂ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. 
ಇಂದು ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಎಸ್ ವೈ, ಬೆಂಗಳೂರಿನ ಸ್ಟೀಲ್‌ ಫ್ಲೈ ಓವರ್‌ ಯೋಜನೆಯಲ್ಲಿ 150 ಕೋಟಿ ಅವ್ಯವಹಾರ ನಡೆದಿದ್ದು, ಇದರಲ್ಲಿ 65 ಕೋಟಿ ರುಪಾಯಿ ಸಿಎಂ ಸಿದ್ದರಾಮಯ್ಯ ಮೂಲಕ ಹೈ ಕಮಾಂಡ್‌ ಕೈಗೆ ತಲುಪಿದೆ ಎಂದು ಆರೋಪಿಸಿದರು.
ಜಾರಿ ನಿರ್ದೇಶನಾಲಯದ ವಶದಲ್ಲಿರುವ ಡೈರಿಯಲ್ಲಿ ಸ್ಟೀಲ್ ಫ್ಲೈ ಓವರ್ ಹಗರಣ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗೆ ನೀಡಿದ ಒಂದು ಸಾವಿರ ಕೋಟಿ ರುಪಾಯಿಯ ಉಲ್ಲೇಖವಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ವಿಸ್ತೃತ ವಿವರ ನೀಡುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.
ಹಣ ಹಂಚುವ ಡೀಲ್‌ನಲ್ಲಿ ವಿಧಾನ ಪರಿಷತ್ ಸದಸ್ಯ ಗೋವಿಂದ್‌ ರಾಜು ಅವರು ಪೋಸ್ಟ್‌ ಮ್ಯಾನ್‌ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ, ಐಟಿ ದಾಳಿಗೆ ಒಳಗಾಗಿರುವ ಸಚಿವ ರಮೇಶ್ ಜಾರಕಿಹೊಳಿ ಅವರು ಈ ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ಹಗಲು ದರೋಡೆ  ನಡೆಯುತ್ತಿದೆ. 1000 ಕೋಟಿ ರುಪಾಯಿ ಹೈಕಮಾಂಡ್‌ಗೆ ಸಿದ್ದರಾಮಯ್ಯ ನೀಡಿರುವುದು ಸತ್ಯ . ಈ ಬಗ್ಗೆ ಇಡಿ ವಶದಲ್ಲಿ ಇರುವ ಡೈರಿಯಲ್ಲಿ ಉಲ್ಲೇಖವಿದೆ. ಅದು ಹೌದಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡುತ್ತಾರೋ? ಎಂದು ಬಿಎಸ್ ವೈ ಸವಾಲು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com