2018ರ ವಿಧಾನಸಭೆ ಚುನಾವಣೆಗೆ ಸಿದ್ಧತೆ: ಮಾರ್ಚ್ ಮೊದಲ ವಾರದಲ್ಲಿ ಜೆಡಿಎಸ್ ಪಟ್ಟಿ ಬಿಡುಗಡೆ

2018ರ ರಾಜ್ಯ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಸಿದ್ಧಗೊಳ್ಳುತ್ತಿದ್ದು, ಫೆಬ್ರವರಿ ಕೊನೆ ವಾರ ಇಲ್ಲವೇ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಅಭ್ಯರ್ಥಿಗಳ ಮೊದಲ ...
ಕುಮಾರಸ್ವಾಮಿ
ಕುಮಾರಸ್ವಾಮಿ

ಬೆಂಗಳೂರು: 2018ರ ರಾಜ್ಯ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಸಿದ್ಧಗೊಳ್ಳುತ್ತಿದ್ದು, ಫೆಬ್ರವರಿ ಕೊನೆ ವಾರ ಇಲ್ಲವೇ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ  ಆರಂಭಗೊಂಡಿದ್ದು, ಪಟ್ಟಿ ಅಂತಿಮಗೊಂಡ ನಂತರ  ಬೃಹತ್‌ ಸಮಾವೇಶ ನಡೆಸಿ ಕನಿಷ್ಟ 105 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ಜೆಡಿಎಸ್‌ ನಿರ್ಧರಿಸಿದೆ ಎಂದು ತಿಳಿಸಿದರು.
ಪಕ್ಷದ ವೀಕ್ಷಕರ ತಂಡಗಳು ಸಲ್ಲಿಸಿರುವ ವರದಿ ಆಧರಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದ್ದು, ಆಕಾಂಕ್ಷಿಗಳು ಹೆಚ್ಚಿರುವ ಕಡೆಗಳಲ್ಲಿ ಮಾತುಕತೆ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್‌ ನೀಡಲು ನಿರ್ಧರಿಸಲಾಗುವುದು ಎಂದು ಹೇಳಿದರು.

ನಮ್ಮ ಕುಟುಂಬದಿಂದ ನಾನು ಮತ್ತು ರೇವಣ್ಣ ಮಾತ್ರ ಸ್ಪರ್ಧೆ ಮಾಡುತ್ತಿದ್ದು, ಬೇರಾರೂ ಸ್ಪರ್ಧೆ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದರು. ಜೆಡಿಎಸ್‌ ಅಪ್ಪ -ಮಕ್ಕಳ ಪಕ್ಷ ಎಂದು ಎಲ್ಲರೂ ಟೀಕಿಸುತ್ತಾರೆ, ಪಕ್ಷದ ಇಮೇಜ್ ಬದಲಾಯಿಸಲು ಕುಟುಂಬಸ್ಥರು ಯಾರು ಸ್ಪರ್ಧಿಸುವುದಿಲ್ಲ.ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕೆಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ, ಆದರೆ ಈ ಬೇಡಿಕೆಯನ್ನು ನಾನು ನಿರಾಕರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಪಟ್ಟಿ ಬಿಡುಗಡೆಯ ಬಳಿಕ ಅಭ್ಯರ್ಥಿಗಳಿಗೆ ಚುನಾವಣೆ ಸಿದ್ಧತೆ ಹೇಗಿರಬೇಕು ಎಂಬ ಕುರಿತು ಪಕ್ಷದಿಂದ ಕಾರ್ಯಾಗಾರವನ್ನು ನಡೆಸಲಾಗುವುದು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಕೆಲವು ಶಾಸಕರ ನಡವಳಿಕೆಗಳು ಕೆಟ್ಟದ್ದಾಗಿರುವ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದನೆ ಹಾಗೂ ಸಾರ್ವಜನಿಕವಾಗಿ ಸೌಜನ್ಯದ ನಡವಳಿಕೆ ರೂಢಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ಮಾಡಲಾಗುವುದು, ಎಂದು ತಿಳಿಸಿದರು.

ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಕಡಿಮೆ ಅವಧಿಯ ಈ ಉಪಚುನಾವಣೆಗೆ ಸ್ಪರ್ಧೆ ಮಾಡಬೇಕೇ ಅಥವಾ ಬೇಡವೇ ಎಂಬ ಕುರಿತು ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನಕ್ಕೆ ಬರಲು ಕೋರ್‌ ಕಮಿಟಿ ನಿರ್ಧರಿಸಿತು ಎಂದು ತಿಳಿಸಿದರು. ಉಪ ಚುನಾವಣೆಗೆ ಖರ್ಚು ಮಾಡುವ ಹಣವನ್ನು ಕೂಡಿಟ್ಟು 2018ರ ವಿಧಾನ ಸಭೆ ಚುನಾವಣೆಗೆ ಬಳಸಲು ಪಶ್ರದ ಕಾರ್ಯಕರ್ತರು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com