ಎಸ್ಎಂ ಕೃಷ್ಣ ಬಿಜೆಪಿಗೆ ಬಂದರೆ ನಮಗೆ ದೊಡ್ಡ ಶಕ್ತಿ ಬಂದಂತೆ: ಯಡಿಯೂರಪ್ಪ

ಹಿರಿಯ ಮುಖಂಡ ಎಸ್ ಎಂ ಕೃಷ್ಣ ಬಿಜೆಪಿಗೆ ಬಂದರೆ ನಮಗೆ ದೊಡ್ಡ ಶಕ್ತಿ ಬಂದಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
ಎಸ್.ಎಂ ಕೃಷ್ಣ
ಎಸ್.ಎಂ ಕೃಷ್ಣ

ಮೈಸೂರು: ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಕಾಂಗ್ರೆಸ್ ಗೆ ರಾಜಿನಾಮೆ ನೀಡಿರುವುದು ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ.

ಹಿರಿಯ ಮುಖಂಡ ಎಸ್ ಎಂ ಕೃಷ್ಣ ಬಿಜೆಪಿಗೆ ಬಂದರೆ ನಮಗೆ ದೊಡ್ಡ ಶಕ್ತಿ ಬಂದಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಎಸ್. ಎಂ ಕೃಷ್ಣ ಒಬ್ಬ ಸಜ್ಜನ ರಾಜಕಾರಣಿ, ಅವರ ಸೇರ್ಪಡೆಯಿಂದ ನಮ್ಮ ಶಕ್ತಿ ಮತ್ತಷ್ಟು ಹೆಚ್ಚಲಿದೆ ಎಂದು ಬಿಎಸ್ ವೈ ಅಭಿಪ್ರಾಯ ಪಟ್ಟಿದ್ದಾರೆ.

ಎಸ್ ಎಂ ಕೃಷ್ಣ ಬಿಜೆಪಿ ಸೇರುವ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ, ಅವರ ಜೊತೆ ಮಾತನಾಡಿ, ಚರ್ಚಿಸಿ ಮುಂದಿನ ನಿರ್ಧಾರಗಳ ಬಗ್ಗೆ ಪ್ರಕಟಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ಹಿರಿಯ ಮುಖಂಡರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ಉಪ ಚುನಾವಣೆ ಹಾಗೂ 2018 ರ ವಿಧಾನಸಭೆ ಚುನಾವಣೆಗಳಿಗಾಗಿ ತಮ್ಮ ನಡುವಿನ ಕದನಕ್ಕೆ ತಿಲಾಂಜಲಿ ಹಾಡಿದ್ದಾರೆ. ಹಿಂದುಳಿದ ವರ್ಗಗಳ ಮತಗಳನ್ನ ಸೆಳೆಯಲು ತಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದಾರೆ. ಎಸ್ ಎಂ ಕೃಷ್ಣ ಕಾಂಗ್ರೆಸ್ ನಿಂದ ಹೊರಬಂದಿರುವುದರ ಲಾಭ ಪಡೆಯಲು ಬಿಜೆಪಿ ಸಜ್ಜಾಗಿದೆ.

ನಗರ ಜನತೆಯ ಹಾಗೂ ನಗರ ಕಾಂಗ್ರೆಸ್ ನ ಮೆಚ್ಚಿನ ವ್ಯಕ್ತಿ ಎಸ್ ,ಎಂ ಕೃಷ್ಣ. ರಾಜ್ಯದ ಐಟಿ-ಬಿಟಿ ಕ್ರಾಂತಿಯ ಹರಿಕಾರನೆಂದು ಗುರುತಿಸಿಕೊಂಡಿರುವ ಬೆಂಗಳೂರು ನಾಗರಿಕರ ನೆಚ್ಚಿನ ನಾಯಕ. 84 ವರ್ಷದ ಕೃಷ್ಣ ಯಾವತ್ತೂ ತಾವೊಬ್ಬ ಸಮುದಾಯದ ಮುಖಂಡ ಎಂದು ಗುರುತಿಸಿಕೊಂಡವರಲ್ಲ,  ತಮ್ಮ ವ್ಯಕ್ತಿತ್ವ, ನಿಲುವು, ನಮ್ರತೆ ಹಾಗೂ ಜೀವಲನ ಶೈಲಿಯಿಂದ ಜಾತಿ ಎಂಬ ಗೆರೆ ದಾಟಿ ಜನರಿಂದ ಗೌರವಕ್ಕೊಳಗಾದವರು.

ಒಕ್ಕಲಿಗ ಸಮುದಾಯದ ಪ್ರಾತಿನಿಧ್ಯ ಹೆಚ್ಚಾಗಿರುವ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯವರಾದ ಕೃಷ್ಣ, ನಡೆಸಿದ ಪಾಂಚಜನ್ಯ ಯಾತ್ರೆ 1999ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಹಾಯವಾಯಿತು. ಕೃಷ್ಣ ಅವರ ಈ ಯಾತ್ರೆಯಿಂದ  ಒಕ್ಕಲಿಗರು ತಮ್ಮ ಬೆಂಬಲಕ್ಕಿದ್ದಾರೆ ಎಂಬುದು ಅರಿವಿಗೆ ಬಂತು.

ಇನ್ನೊಂದು ವರ್ಷದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಎದುರಾಗಲಿದೆ, ಇಂತಹ ಪರಿಸ್ಥಿತಿಯಲ್ಲಿ ಕೃಷ್ಣ  ರಾಜಿನಾಮೆ ನೀಡಿರುವುದು ಕಾಂಗ್ರೆಸ್ ಗೆ ನುಂಗಲಾರದ ಬಿಸಿತುಪ್ಪವಾದಂತಿದೆ. ಕೃಷ್ಣ ರಾಜಿನಾಮೆಯಿಂದ ಒಕ್ಕಲಿಗ ಮತಗಳನ್ನು ಸೆಳೆಯವುದು ಕಾಂಗ್ರೆಸ್ ಗೆ ಸುಲಭದ ವಿಷಯವಲ್ಲ.

ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯ, ಎಸ್ ಎಂ ಕೃಷ್ಣ ಅವರನ್ನು ಕಡೆಗಣಿಸುವ ಮೂಲಕ ಒಕ್ಕಲಿಗರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಒಕ್ಕಲಿಗರನ್ನು ಓಲೈಸಲು ಮುಂದಾಗಲಿದೆ.

ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ 123 ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಹಳೆಯ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಯತ್ನಿಸುತ್ತಿವೆ. ರೆಬೆಲ್ ಸ್ಟಾರ್ ಅಂಬರೀಷ್ ರನ್ನು ಪಕ್ಷಕ್ಕೆ ಸೇರಿಸಿಕೊಂಡು ಒಕ್ಕಲಿಗ ಮತದಾರರನ್ನು ಸೆಳೆಯಲು ಬಿಜೆಪಿ ಯೋಜನೆ ರೂಪಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ತಮ್ಮನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಎಸ್ ಎಂ ಕೃಷ್ಣ ಹೇಳಿಕೆ ನೀಡಿದ್ದಾರೆ. ಇದನ್ನೆ ಅಸ್ತ್ರವನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯ ಹಿರಿಯ ನಾಯಕರನ್ನು ಅವಮಾನಿಸಿದ್ದಾರೆ. ತಮ್ಮನ್ನು 2006 ರಲ್ಲಿ ಕಾಂಗ್ರೆಸ್ ಕರೆತಂದ ಕೃಷ್ಣ ಅವರ ಬೆನ್ನಿಗೆ ಸಿದ್ದರಾಮಯ್ಯ ಚೂರಿ ಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ.

ಸಿದ್ದರಾಮಯ್ಯ ವಿರುದ್ಧ ಜಾತಿ ಅಸ್ತ್ರ ಪ್ರಯೋಗಿಸಲು ಜೆಡಿಎಸ್ ಈಗಾಗಲೇ ತರಬೇತಿ ನಡೆಸುತ್ತಿದೆ. ಸಮುದಾಯದ ಮತಗಳನ್ನು ಪಡೆದುಕೊಳ್ಳಲು ಒಕ್ಕಲಿಗರ ಕಾರ್ಡ್ ಪ್ಲೇ ಮಾಡಲು ಸಿದ್ಧತೆ ಮಾಡುತ್ತಿದೆ.

ಡಿ.ಕೆ ಶಿವಕುಮಾರ್, ಕೃಷ್ಣಪ್ಪ ಹಾಗೂ ಕೃಷ್ಣ ಭೈರೇಗೌಡ ರಂತಹ ಒಕ್ಕಲಿಗರ ಮುಖಂಡರು ಕಾಂಗ್ರೆಸ್ ನಲ್ಲಿದ್ದರೂ,ಅವರಿಗೆ ನಗರದ ಮತದಾರರನ್ನು ಸೆಳೆಯಲು ಸಾಮರ್ಥ್ಯವಿಲ್ಲ, ಮತ್ತೊಬ್ಬ ಒಕ್ಕಲಿಗರ ಪ್ರಭಾವಿ ನಾಯಕರಾಗಿರು ನಟ ಅಂಬರೀಷ್ ಪಕ್ಷ ತ್ಯಜಿಸಿದರೇ  ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಶಕ್ತಿ ಮತ್ತಷ್ಟು ಕುಗ್ಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹಿರಿಯ ನಾಯಕರ ಕಡೆಗಣನೆ, ತಪ್ಪು ರಾಜಕೀಯ ನಿರ್ಧಾರಗಳಿಗೆ ಕಾಂಗ್ರೆಸ್ ದುಬಾರಿ ಬೆಲೆ ತೆರಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com