ವಿಧಾನಸಭೆ ಚುನಾವಣೆ ಹಿನ್ನೆಲೆ: ಸುನೀಲ್ ಬೋಸ್ ಗೆ ಸಾಂವಿಧಾನಿಕ ಹುದ್ದೆ ನೀಡಿ ರಾಜ್ಯ ಸರ್ಕಾರದ ಆದೇಶ

: ಮರಳು ಗಣಿಗಾರಿಕೆಯ ಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಲೋಕೋಪಯೋಗಿ ಸಚಿವ ಎಚ್. ಸಿ ಮಹಾದೇವಪ್ಪ ಪುತ್ರ ಸುನೀಲ್ ....
ಸುನೀಲ್ ಬೋಸ್
ಸುನೀಲ್ ಬೋಸ್
ಮೈಸೂರು: ಮರಳು ಗಣಿಗಾರಿಕೆಯ ಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ  ಲೋಕೋಪಯೋಗಿ ಸಚಿವ ಎಚ್. ಸಿ ಮಹಾದೇವಪ್ಪ ಪುತ್ರ ಸುನೀಲ್ ಬೋಸ್ ಗೆ ರಾಜ್ಯ ಸರ್ಕಾರ ಸಾಂವಿಧಾನಿಕ ಹುದ್ದೆ ನೀಡಿ ಆದೇಶ ಹೊರಡಿಸಿದೆ.
ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷರನ್ನಾಗಿ ಸುನೀಲ್‌ ಬೋಸ್‌ ಅವರನ್ನು ನೇಮಕ ಮಾಡಿದೆ.
ಡಾ.ಬಿ.ಆರ್‌.ಅಂಬೇಡ್ಕರ್‌ ನಿವಾಸ್‌ ಯೋಜನೆಯನ್ನು ಅನುಷ್ಠಾನಗೊಳಿಸಿ ಫ‌ಲಾನುಭವಿಗಳ ಆಯ್ಕೆ ಬಗ್ಗೆ ಹಾಗೂ ವಸತಿ ಇಲಾಖೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಗ್ರಾಮೀಣ ವಸತಿ ಯೋಜನೆಗೆ ಸಂಬಂಧಿಸಿದಂತೆ  ನರಸೀಪುರ ವಿಧಾನಸಭಾ ಕ್ಷೇತ್ರದ ಜಾಗೃತಿ ಸಮಿತಿಗೆ ಅಧ್ಯಕ್ಷರು ಹಾಗೂ ಅಧಿಕಾರೇತರ ಸದಸ್ಯರನ್ನು ನೇಮಿಸಿ ವಸತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸಿ.ಎಸ್‌. ಆದೇಶ ಹೊರಡಿಸಿದ್ದಾರೆ.
ಚುನಾಯಿತ ಜನಪ್ರತಿನಿಧಿಯಲ್ಲದಿದ್ದರೂ ಯಾವುದೇ ಸಾಂವಿಧಾನಿಕಹುದ್ದೆ ಹೊಂದಿಲ್ಲದಿದ್ದರೂ ಸರ್ಕಾರಿ ಅಧಿಕಾರಿಗಳ ಸಭೆ ನಡೆಸಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದ ಹಿನ್ನೆಲೆ ಕಳೆದ ಎರಡು ತಿಂಗಳ ಹಿಂದಷ್ಟೇ ಸಿಎಂ ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಅವರನ್ನು ವರುಣಾ ವಿಧಾನಸಭಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಸಚಿವ ಡಾ.ಎಚ್‌.ಸಿ.ಮಹದೇವಪ್ಪರ ಪುತ್ರ ಸುನೀಲ್‌ ಬೋಸ್‌ ಅವರನ್ನು ನೇಮಕ ಮಾಡಲಾಗಿದೆ.
ನಂಜನಗೂಡು ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸುನೀಲ್ ಬೋಸ್ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಮರಳು ಗಣಿಗಾರಿಕೆ ಲಂಚ ಪ್ರಕರಣದಲ್ಲಿ ಸುನೀಲ್ ಹೆಸರು ಕೇಳಿ ಬಂದ ಕಾರಣ ಬಲವಂತವಾಗಿ ಸ್ಪರ್ದೆಯಿಂದ ಹಿಂದೆ ಸರಿಯುವಂತೆ ಮಾಡಿತು. 
ಮರಳು ಗಣಿಗಾರಿಕೆಗೆ ಅನುಮತಿ ನೀಡಲು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಗೆ 1ಲಕ್ಷ ರು. ಲಂಚ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು. 
ಇನ್ನೂ ಸುನೀಲ್ ಬೋಸ್ ಗೆ  ಸಾಂವಿಧಾನಿಕ ಹುದ್ದೆ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ತಿ. ನರಸೀಪುರ ಕಾಂಗ್ರೆಸ್ ಮಾಜಿ ನಾಯಕ ಅತ್ತನಹಳ್ಳಿ ದೇವರಾಜ್, ಅಧಿಕಾರವಿಲ್ಲದೇ ಇದ್ದಾಗ ಆತ ತನ್ನ ರಾಜಕೀಯದ ಸಂಬಂಧಗಳನ್ನು ದುರುಪಯೋಗ ಪಡಿಸಿಕೊಂಡಿದ್ದು. ಈಗ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಮತ್ತಷ್ಟು ದಬ್ಬಾಳಿಕೆ ನಡೆಸಲು ಲೈಸೆನ್ಸ್ ಸಿಕ್ಕಂತಾಗಿದೆ ಎಂದು ಅವರು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com