ಬೆಂಗಳೂರು: ಜೆಡಿಎಸ್ ನಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದೆ ಎಂದು ಪ್ರಜ್ವಲ್ ರೇವಣ್ಣ ನೀಡಿರುವ ಹೇಳಿಕೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅವನ ಮಾತು ನೋವು ತಂದಿದೆ. ನನ್ನ ಬದುಕಿನಲ್ಲಿ ಎಂದೂ ಸೂಟ್‌ಕೇಸ್ ಸಂಸ್ಕೃತಿ ಮಾಡಿಲ್ಲ. ದುಡ್ಡು ಮಾಡುವ ಕೆಲಸಕ್ಕೆ ಎಂದೂ ಕೈಹಾಕಿದವನಲ್ಲ. ಬಡ್ಡಿ ಕೊಟ್ಟು ಸಾಲ ತಂದು ಚುನಾವಣೆ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ನೊಂದು ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರ, ಶಿಸ್ತು ಇಲ್ಲದೆ ಇದ್ದರೆ ಮಗನಾದರೆ ಏನು, ಮೊಮ್ಮಗನಾದರೆ ಏನು. ಪಕ್ಷದಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದೆ ಎಂದು ಹೇಳಿಕೆ ನೀಡಿದ ಅವನ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಗುಡುಗಿದ್ದಾರೆ.
ಪ್ರಜ್ವಲ್ ಹಿಂದೆಮುಂದೆ ಓಡಾಡಿ ಕೊಂಡಿರುವವರು ಸರಿ ಇಲ್ಲ. ಕೆಲವರಿಗೆ ಬೇರೆ ಉದ್ದೇಶವೂ ಇದ್ದಂತಿದ್ದು, ಅವನನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಕೀಯದಲ್ಲಿ ಆವೇಶದಿಂದ ಮಾತನಾಡಿದರೆ ಏನೂ ಆಗುವುದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಪ್ರಕರಣಗಳನ್ನು ಅನೇಕ ಬಾರಿ ನೋಡಿದ್ದೇನೆ. ಈ ರೀತಿಯ ಮಾತುಗಳಿಂದ ಅವನಿಗೇ ನಷ್ಟ ಎಂದು ಹೇಳಿದ್ದಾರೆ.
ನಮ್ಮ ಕುಟುಂಬದಿಂದ ಅನಿತಾ ಮತ್ತು ಭವಾನಿ ಇಬ್ಬರೂ ಚುನಾವಣೆಯಲ್ಲಿ ನಿಲ್ಲಬಹುದು. ಅವರಿಬ್ಬರನ್ನು ಬಿಟ್ಟು ಬೇರೆ ಯಾವ ಹೆಣ್ಣುಮಕ್ಕಳೂ ರಾಜಕೀಯಕ್ಕೆ ಬರುವುದಿಲ್ಲ ಎಂದು ದೇವೇಗೌಡ ಹೇಳಿದರು.
ಈ ಹಿಂದೆ ನಮ್ಮ ಕುಟುಂಬದಿಂದ ರೇವಣ್ಣ ಮತ್ತು ನಾನು ಮಾತ್ರ ವಿಧಾನಸಬೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಹೇಳಿದ್ದರು. ಇನ್ನೂ ಚನ್ನಪಟ್ಟಣ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಆಗ್ರಹ ಮಾಡುವುದು ಸಹಜ. ಅವರು ಸ್ಪರ್ಧೆ ಮಾಡಿದರೆ ರಾಮನಗರ (ಕುಮಾರಸ್ವಾಮಿ ಕ್ಷೇತ್ರ) ಜವಾಬ್ದಾರಿ ಹೊರುವವರು ಯಾರು. ಕುಮಾರಸ್ವಾಮಿ ಗೆಲುವಿಗೆ ಶ್ರಮಿಸಬೇಕಾದುದು ಅನಿತಾ ಹೊಣೆ. ಅವರಿಗೂ ತಿಳಿ ಹೇಳುತ್ತೇನೆ ಎಂದು ದೇವೇಗೌಡರು ತಿಳಿಸಿದ್ದಾರೆ.
ಇನ್ನೂ ಪ್ರಜ್ವಲ್ ರೇವಣ್ಣ ಸೂಟ್ ಹೇಳಿಕೆಗೆ ಜೆಡಿಎಸ್ ಭಿನ್ನರು ಬೆಂಬಲ ವ್ಯಕ್ತ ಪಡಿಸಿದ್ದಾರೆ., ಸೂಟ್ ಕೇಸ್ ರಾಜಕೀಯ ಮಾಡುವುದರಲ್ಲಿ ಕುಮಾರಸ್ವಾಮಿ ಎತ್ತಿದ ಕೈ. ಪ್ರಜ್ವಲ್ ರೇವಣ್ಣ ಹೇಳಿರುವುದು ಸತ್ಯ’ ಎಂದು ಜೆಡಿಎಸ್‌ನಿಂದ ಅಮಾನತು ಗೊಂಡಿರುವ ಶಾಸಕ ಜಮೀರ್ ಅಹಮದ್ ಖಾನ್ ಹಾಗೂ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.
ಜೆಡಿಎಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ. ಪ್ರಜ್ವಲ್ ನೀಡಿದ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ. ದೇವೇಗೌಡರ ತೀರ್ಮಾನವೇ ಅಂತಿಮ ಎಂದು ಪ್ರಜ್ವಲ್ ತಂದೆ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.