ತುಮಕೂರು: 2018ರ ವಿಧಾನ ಸಭೆ ಚುನಾವಣೆಯಲ್ಲಿ ಬೆಳಗಾವಿಯ ರಾಯಭಾಗ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿ ಹೊಳಿ ಆಹ್ವಾನಿಸಿದ್ದಾರೆ. ಆದರೆ ಕೊರಟಗೆರೆ ಕ್ಷೇತ್ರ ಬಿಟ್ಟು ತೆರಳದಂತೆ ಪರಮೇಶ್ವರ್ ಬೆಂಬಲಿಗರು ಆಗ್ರಹಿಸಿದ್ದಾರೆ.
ಬೆಂಬಲಿಗರ ಒತ್ತಾಯಕ್ಕೆ ಮಣಿದಿರುವ ಪರಮೇಶ್ವರ್ ಗೊಲ್ಲಹಳ್ಳಿಯ ಸಮೀಪ ಬೆಂಬಲಿಗರ ಸಭೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಕೊರಟಗೆರೆ ಕ್ಷೇತ್ರ ಬಿಡಬಾರದು, ಈ ಬಾರಿ ಗೆಲುವು ನಿಶ್ಚಿತ ಎಂದು ಪರಮೇಶ್ವರ್ ಕಟ್ಟಾ ಬೆಂಬಲಿಗ ಪುಟ್ಟ ಹರಿಯಪ್ಪ ಹೇಳಿದ್ದಾರೆ.
ಪರಮೇಶ್ವರ್ ಛಲವಾದಿ ಸಮುದಾಯವನ್ನು ಕೊರಟಗೆರೆ ಕ್ಷೇತ್ರದಿಂದ ಪ್ರತಿನಿಧಿಸಲಿದ್ದಾರೆ. ಅವರು ಹೀಗಾಗಿ ಕ್ಷೇತ್ರ ತೊರೆಯಬಾರದು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಪರಮೇಶ್ವರ್ ಕ್ಷೇತ್ರ ಬಿಡುವುದಾದರೇ ತಮ್ಮ ಸೋದರಳಿಯ ಆನಂದ್ ನನ್ನು ರಾಜಕೀಯಕ್ಕೆ ತರಬೇಕೆಂದು ಸಲಹೆ ನೀಡಿದ್ದಾರೆ.
ಆದರೆ ಪರಮೇಶ್ವರ್ ವಿರೋಧಿಗಳಾದ ಮಲ್ಲೇಕಾವು ಸುರೇಶ್ ಮುಂತಾದವರು ಪರಮೇಶ್ವರ್ ಕೊರಟಗೆರೆ ಕ್ಷೇತ್ರ ಬಿಡುವುದೇ ಸೂಕ್ತ ಎಂದು ಹೇಳಿದ್ದಾರೆ.
ಆನಂದ್ ಗೆ ರಾಜಕೀಯದಲ್ಲಿ ಆಸಕ್ತಿ ಇದೆ ಆದರೆ ತಮ್ಮ ಸೋದರ ಮಾವ ಪರಮೇಶ್ವರ್ ಅವರ ಭಯದಿಂದಾಗಿ ರಾಜಕೀಯದಿಂದ ದೂರ ಉಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.