ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ: ಇಂದಿರಾಗಾಂಧಿ ಹೆಸರಲ್ಲಿ ಪಾದಯಾತ್ರೆ

ರಾಜ್ಯ ಕಾಂಗ್ರೆಸ್ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ 2018ರ ವಿಧಾನ ಸಭೆ ಚುನಾವಣೆ ಎದುರಿಸಲು ಸನ್ನದ್ಧವಾಗುತ್ತಿದೆ....
ಸಭೆಯಲ್ಲಿ  ವೇಣುಗೋಪಾಲ್, ಸಿದ್ದರಾಮಯ್ಯ, ಮತ್ತು ಜ. ಪರಮೇಶ್ವರ್
ಸಭೆಯಲ್ಲಿ ವೇಣುಗೋಪಾಲ್, ಸಿದ್ದರಾಮಯ್ಯ, ಮತ್ತು ಜ. ಪರಮೇಶ್ವರ್
Updated on
ಬೆಂಗಳೂರು:  ರಾಜ್ಯ ಕಾಂಗ್ರೆಸ್ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ 2018ರ ವಿಧಾನ ಸಭೆ ಚುನಾವಣೆ ಎದುರಿಸಲು ಸನ್ನದ್ಧವಾಗುತ್ತಿದೆ.
2013ರಲ್ಲಿ ನಡೆಸಿದ ಬೆಂಗಳೂರಿನಿಂದ -ಬಳ್ಳಾರಿ ಪಾದಯಾತ್ರೆ ಯಶಸ್ವಿ ನಂತರ ಮತ್ತೆ ಪಾದಯಾತ್ರೆ ನಡೆಸಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. 
ನವೆಂಬರ್ ನಲ್ಲಿ ಇಂದಿರಾಗಾಂಧಿ ಅವರ ಜನ್ಮ ಶತಮಾನೋತ್ಸವ ನಡೆಯಲಿದ್ದು, ಆ ಅವಕಾಶವನ್ನು ಪಕ್ಷ ಬಲವರ್ಧನೆಗೆ ಬಳಸಿಕೊಳ್ಳಲು ಕೆಪಿಸಿಸಿ ಚಿಂತನೆ ನಡೆಸುತ್ತಿದೆ, ಇಂದಿರಮ್ಮ-100,  ಹೆಸರಿನಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಪಾದಯಾತ್ರೆ ನಡೆಸಲಿದೆ,
ಪಾದಯಾತ್ರೆ ಹೊರತು ಪಡಿಸಿ, ಸಾಮೂಹಿಕ ಸಂಪರ್ಕ ಕಾರ್ಯಕ್ರಮ, ಸೇರಿದಂತೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಲುವಾಗಿ, ಮುಂದಿನ ನಾಲ್ಕು ತಿಂಗಳಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದ್ದಾರೆ.
ಕೆಪಿಸಿಸಿಗೆ 171 ಪದಾಧಿಕಾರಿಗಳ ನೇಮಕ ಮಾಡಿದ ಮೇಲೆ ಇದೇ ಮೊದಲ ಬಾರಿಗೆ ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ಸಿಎಂ ಸಿದ್ದರಾಮಯ್ಯ ನೇತೃತ್ವ ದಲ್ಲಿ ಸಭೆ ನಡೆದಿದ್ದು, ಹೊಸದಾಗಿ ನೇಮಕವಾಗಿರುವ 17 ಉಪಾಧ್ಯಕ್ಷರುಗಳಿಗೆ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಮೊದಲು ಜವಾಬ್ದಾರಿ ಇಲ್ಲ, ಹುದ್ದೆ ಇಲ್ಲ ಎಂದು ಹೇಳುತ್ತಿದ್ದಿರಿ. ಈಗ ಜವಾಬ್ದಾರಿ ಕೊಡಲಾಗಿದೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡುವತ್ತ ಗಮನಹರಿಸಿ’ ಎಂದು ಅವರು ಶುಕ್ರವಾರ ನಡೆದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ನಿಮಗೀಗ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗ ಮಾಡಿಕೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮವಹಿಸಿ. ರಾಜ್ಯದಲ್ಲಿ ಮತ್ತೆ ನಮ್ಮ ಸರ್ಕಾರ ಬಂದರೆ ಅದರಿಂದ ನಿಮಗೇ ಲಾಭ ಎಂದೂ ಹೇಳಿದ್ದಾರೆ. ನವೆಂಬರ್ 1 ರಿಂದ 18ರ ವರೆಗೆ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ.ಇಂದಿರಮ್ಮನ ಹಾದಿಯಲ್ಲಿ ಜನ ಸಾಮಾನ್ಯರ ಸೇವೆಯಲ್ಲಿ ಕಾಂಗ್ರೆಸ್‌' ಎಂಬ ಘೋಷಣೆಯಡಿ ರಾಜ್ಯದ ಕಾಂಗ್ರೆಸ್‌ ಸರಕಾರದ ಸಾಧನೆ, ಇಂದಿರಾ ಗಾಂಧಿಯವರ ಕಾರ್ಯಕ್ರಮ, ಬದ್ಧತೆಯನ್ನು ಜನ ಸಾಮಾನ್ಯರಿಗೆ ತಲುಪಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಪ್ರತ್ಯೇಕ  ಕನ್ನಡ ಧ್ವಜದ ವಿವಾದವನ್ನು  ಜಾಣ್ಮೆಯಿಂದ ನಿಭಾಯಿಸಿ, ಪಕ್ಷದ ಹಿತಕ್ಕೆ  ಧಕ್ಕೆ ಆಗದಂತೆ ನೋಡಿಕೊಳ್ಳಬೇಕು’ ಎಂದು ವೇಣುಗೋಪಾಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ. ಪದಾಧಿಕಾರಿಗಳ ಸಭೆಯ ಬಳಿಕ ಮುಖ್ಯಮಂತ್ರಿ ಜತೆ ಪ್ರತ್ಯೇಕ ಮಾತುಕತೆ ನಡೆಸಿ, ಧ್ವಜ ವಿವಾದದ ಬಗ್ಗೆ ಚರ್ಚಿಸಿದರು ಎಂದು ಹೇಳಲಾಗಿದೆ.
ಮಹಾನಗರಪಾಲಿಕೆಯ 125 ವಾರ್ಡ್‌ಗಳಲ್ಲಿ ಆ.15ರಂದು ಇಂದಿರಾ ಕ್ಯಾಂಟೀನ್ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 106 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳು ಸಿದ್ಧವಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆದರೆ,  125 ವಾರ್ಡ್‌ಗಳಲ್ಲಿ ಕ್ಯಾಂಟೀನ್ ಆರಂಭ ಆಗಬೇಕೆಂದು  ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
 ಜಾಗದ ಸಮಸ್ಯೆ ಇರುವ 73 ವಾರ್ಡ್‌ಗಳಲ್ಲಿ ಅಕ್ಟೋಬರ್‌ 2ರಂದು  ಕ್ಯಾಂಟೀನ್‌ಗಳು ಆರಂಭವಾಗಲಿವೆ. 28   ಅಡುಗೆ ಮನೆಗಳನ್ನು ತೆರೆಯಬೇಕಿದ್ದು, ಈ ಪೈಕಿ 21 ಅಡುಗೆ ಮನೆಗಳ ಕೆಲಸ ಮುಗಿದಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com