ಹುಬ್ಬಳ್ಳಿ: ವೀರಶೈವ ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮವನ್ನಾಗಿ ಘೋಷಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಲ್ಟಾ ಹೊಡೆದಿದ್ದು, ಸರ್ಕಾರ ವಿರೋಧಿಸುವವರ ಅಭಿಪ್ರಾಯವನ್ನು ಪರಿಗಣಿಸಲಿದೆ ಎಂದು ಗುರುವಾರ ಹೇಳಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಲಿಂಗಾಯತ ಧರ್ಮ ವಿವಾದದಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯೂ ಇದೆ ಮತ್ತು ಅದಕ್ಕೆ ವಿರೋಧವೂ ಇದೆ. ಹೀಗಾಗಿ ಸರ್ಕಾರ ಪರ-ವಿರೋಧ ಇಬ್ಬರ ಅಭಿಪ್ರಾಯವನ್ನು ಪರಿಗಣಿಸಿಲಿದೆ ಮತ್ತು ಈ ಕುರಿತು ಕಾನೂನು ಸಚಿವಾಲಯ ಅಧ್ಯಾಯನ ನಡೆಸಲಿದೆ ಎಂದು ಹೇಳಿದ್ದಾರೆ.
ಲಿಂಗಾಯತ ಧರ್ಮದ ಪರ-ವಿರೋಧವಿರುವ ಇಬ್ಬರಿಗೂ ತಮ್ಮ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಲಾಗಿದೆ. ಅದನ್ನು ಸರ್ಕಾರ ಕಾನೂನಾತ್ಮಕವಾಗಿ ಮತ್ತು ಸಂವಿಧಾನಾತ್ಮಕವಾಗಿ ಪರಿಶೀಲನೆ ನಡೆಸಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಇದೇ ವೇಳೆ ಆರ್ ಜೆಡಿ, ಕಾಂಗ್ರೆಸ್ ಗೆ ಕೈಕೊಟ್ಟು ಬಿಜೆಪಿಯೊಂದಿಗೆ ಹೊಸ ಸರ್ಕಾರ ರಚನೆ ಮಾಡಿದ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ನಿತೀಶ್ ಕುಮಾರ್ ಒಬ್ಬ ಅವಕಾಶವಾದಿ ನಾಯಕ. ಅವರು ಬಿಹಾರ ಜನಾದೇಶಕ್ಕೆ ದ್ರೋಹ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.