ದೇಶ ವಿದೇಶದಲ್ಲಿ ಈಶ್ವರಪ್ಪ ಬೇನಾಮಿ ಆಸ್ತಿ: ತನಿಖೆ ನಡೆಸುವಂತೆ ಇ.ಡಿ ಗೆ ದೂರು

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ದೇಶ–ವಿದೇಶಗಳಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ...
ಈಶ್ವರಪ್ಪ
ಈಶ್ವರಪ್ಪ
ಬೆಂಗಳೂರು: ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ದೇಶ–ವಿದೇಶಗಳಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಜಾರಿ ನಿರ್ದೇಶನಾಲಯಕ್ಕೆ ದೂರು ದಾಖಲಿಸಲಾಗಿದೆ.
ಶಿವಮೊಗ್ಗದ ವಕೀಲ ಬಿ. ವಿನೋದ್ ಎಂಬುವರು ಜಾರಿ ನಿರ್ದೇಶನಾಲಯಕ್ಕೆ(ಇ.ಡಿ)  ದೂರು ನೀಡಿದ್ದು, ಈಶ್ವರಪ್ಪ ಅವರು ಉಪ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರಾಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು  ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿದ್ದಾರೆ.  ಈ ಕುರಿತು ಲೋಕಾಯುಕ್ತ ಪೊಲೀಸ್‌ ಘಟಕ ಕೂಡ ತನಿಖೆ ನಡೆಸುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಯುನೈಟೆಡ್‌ ಅರಬ್‌ ಎಮಿರೆಟ್ಸ್‌ನ (ಯು.ಎ.ಇ) ಅಬುಧಾಬಿಯಲ್ಲಿ ಕಾಂತೇಶ ಅವರು ರಿಯಲ್ ಎಸ್ಟೇಟ್‌ ವ್ಯವಹಾರದಲ್ಲಿ ಬಂಡವಾಳ  ಹೂಡಿದ್ದಾರೆ. ಪಶ್ಚಿಮ ಬಂಗಾಳದ ಕೊಲ್ಕತ್ತಾ ಹಾಗೂ ದೇಶದ ವಿವಿಧೆಡೆ ಅಕ್ರಮವಾಗಿ ಹಣಕಾಸಿನ ವ್ಯವಹಾರ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲಿರುವ ಆಸ್ತಿ ಪಾಸ್ತಿ ಕುರಿತು ತನಿಖೆ ನಡೆಸುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇರುತ್ತದೆ. ಹೀಗಾಗಿ ಈಶ್ವರಪ್ಪ ಮನೆ ಮೇಲೆ ದಾಳಿ ನಡೆಸಿದ ವೇಳೆ ಸಿಕ್ಕಿರುವ ದಾಖಲೆಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು ಎಂದು ಲೋಕಾಯುಕ್ತ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು. 
ಈಶ್ವರಪ್ಪ ಹಾಗೂ ಅವರ ಪುತ್ರ ಕಾಂತೇಶ್ ತಮ್ಮ ಹೆಸರಿನಲ್ಲಿ  ಹಾಗೂ ಬೇನಾಮಿ ಹೆಸರಿನಲ್ಲಿ ಶಿವಮೊಗ್ಗ ಹಾಗೂ ಬೆಂಗಳೂರಲ್ಲಿ ಆಸ್ತಿ ಹೊಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com