ಉಗ್ರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರ ಒತ್ತಾಯ

ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯದ ಗೆಲುವಿಗೆ ಸರಿಯಾದ ಕಾರ್ಯತಂತ್ರ ರೂಪಿಸಲು ವಿಫಲರಾದ ವಿ.ಎಸ್‌. ಉಗ್ರಪ್ಪ ...
ಉಗ್ರಪ್ಪ
ಉಗ್ರಪ್ಪ
ಬೆಂಗಳೂರು: ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ವಿರುದ್ಧ  ಅವಿಶ್ವಾಸ ನಿರ್ಣಯದ ಗೆಲುವಿಗೆ ಸರಿಯಾದ ಕಾರ್ಯತಂತ್ರ ರೂಪಿಸಲು ವಿಫಲರಾದ ವಿ.ಎಸ್‌. ಉಗ್ರಪ್ಪ ಸೇರಿದಂತೆ ಇತರ ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಅವರಿಗೆ  ಕಾಂಗ್ರೆಸ್‌ನ ಶಾಸಕರು ಪತ್ರ ಬರೆದಿದ್ದಾರೆ.
ಶಂಕರಮೂರ್ತಿ ಅವರನ್ನು ಪದಚ್ಯುತಿಗೊಳಿಸುವ ತಂತ್ರ ರೂಪಿಸುವ ವಿಷಯದಲ್ಲಿ ಪಕ್ಷ ಮತ್ತು ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ ಆಗಿದೆ. ಈ ಹಿನ್ನಡೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕರಾದ ಕೆ.ಎನ್‌. ರಾಜಣ್ಣ, ಎಸ್‌.ಟಿ. ಸೋಮಶೇಖರ್‌, ಮುನಿರತ್ನ, ಶಿವಮೂರ್ತಿ ನಾಯ್ಕ ಕೋರಿದ್ದಾರೆ.
ಸೂಕ್ತ ರೀತಿಯಲ್ಲಿ ಸಮಾಲೋಚನೆ ನಡೆಸಿ, ಕಾರ್ಯತಂತ್ರ ಅಂತಿಮಗೊಳಿಸದೆ ಶಂಕರಮೂರ್ತಿ ಪದಚ್ಯುತಿಗೆ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದೂ ಈ ಪತ್ರದಲ್ಲಿ ಶಾಸಕರು ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌, ‘ಸಭಾಪತಿ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯದಲ್ಲಿ ಪಕ್ಷಕ್ಕೆ ಉಂಟಾದ ಸೋಲು ಮತ್ತು ಉಗ್ರಪ್ಪ ವಿರುದ್ಧ ಶಾಸಕರು ನೀಡಿದ ದೂರಿನ ಕುರಿತು ಆಂತರಿಕವಾಗಿ ಚರ್ಚೆ ನಡೆಸುತ್ತೇವೆ.  ಮುಖ್ಯಮಂತ್ರಿ ಜೊತೆಯೂ ಈ ಕುರಿತು ಮಾತನಾಡುತ್ತೇನೆ. ಸದ್ಯ ಏನೂ ಮಾಡಲು ಸಾಧ್ಯ ಇಲ್ಲ’ ಎಂದರು.
ಪಕ್ಷಕ್ಕೆ ಹಿನ್ನಡೆ ಆಗಿರುವುದು ನಿಜ. ಈ ಬಗ್ಗೆ ಶಾಸಕರು ಅಸಮಾಧಾನ ಹೇಳಿಕೊಂಡಿದ್ದಾರೆ. ಶಾಸಕರ ಭಾವನೆಗಳನ್ನು ಅರ್ಥ ಮಾಡಿಕೊಂಡು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಸುತ್ತೇವೆ ಎಂದರು.
ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿಸಿದ್ದು ನಮಗೆ ಸೋಲು ಉಂಟಾಗಲು ಕಾರಣ ಎಂದು ಉಗ್ರಪ್ಪ ಹೇಳಿದ್ದಾರೆ, ಇದೊಂದು ಅಪವಿತ್ರ ಮೈತ್ರಿ ಎಂದು ಉಗ್ರಪ್ಪ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com