ಬೆಂಗಳೂರು: ಮಾತೆತ್ತಿದರೆ 150 ಸೀಟು ಅಂತೀರಲ್ಲಾ ಅದೇನು ನಿಮ್ಮ ಜೇಬಿನಲ್ಲಿದೆಯೇ ಎಂದು ಸಿದ್ದರಾಮಯ್ಯ ಹತ್ತಾರು ಬಾರಿ ತಮ್ಮ ಜುಬ್ಬಾದ ಜೇಬಿಗೆ ಕೈಹಾಕಿ, ವಿಶಿಷ್ಟ ಹಾವಭಾವದ ಮೂಲಕ ಬಿಜೆಪಿ ನಾಯಕರನ್ನು ಲೇವಡಿ ಮಾಡಿದ ಪ್ರಸಂಗ ವಿಧಾನ ಪರಿಷತ್ ನಲ್ಲಿ ನಡೆಯಿತು.
ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ನೀವು ಒಳ್ಳೆ ನಾಟಕಕಾರರು. ನಾಟಕ ಗಳಲ್ಲಿ ಪಾರ್ಟ್ ಮಾಡುತ್ತಿದ್ದಿರಾ ಎಂದು ಹಾಸ್ಯದ ಲಹರಿಯಲ್ಲಿ ಕೇಳಿದಾಗ ಉತ್ತರಿಸಿದ ಸಿದ್ದರಾಮಯ್ಯ, ನಾನು ಜೀವನದಲ್ಲಿ ಒಮ್ಮೆ ಮಾತ್ರ ನಾಟಕ ಮಾಡಿದ್ದು, ಅದರ ಹೆಸರು ಯಮ ಧರ್ಮರಾಯನ ಸನ್ನಿದ್ಧಿಯಲ್ಲಿ’ ಎಂದು ಹೇಳಿದರು.
ನಾನು ಡಾಕ್ಟರ್ ಪಾತ್ರ ಮಾಡಿದ್ದೆ. ಗೋವಿಂದರಾಜು ಎಂಬಾತ ಯಮಧರ್ಮನ ಪಾತ್ರ ಮಾಡಿದ್ದ ಎಂದರು. ಆಗ ಬಿಜೆಪಿಯ ರಘುನಾಥ ಮಲ್ಕಾಪುರೆ, ‘ನಿಮ್ಮ ಜೊತೆ ಅಡಗೂರು ವಿಶ್ವನಾಥ್ ಅವರೂ ಪಾತ್ರ ಮಾಡಿದ್ದರಲ್ಲ’ ಎಂದು ನೆನಪಿಸಿದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅಹೌದು ಅವರು ವ್ಯಾಪಾರಿ ಪಾತ್ರ ಮಾಡಿದ್ದರು ಎಂದು ಹೇಳಿದರು.
ಬಿಜೆಪಿಯ ತಾರಾ ಅನೂರಾಧ, ನೀವು ಸಿನಿಮಾರಂಗಕ್ಕೆ ಬರಬೇಕಿತ್ತು ಸಾರ್ ಎಂದರು.ನೀನು ಪ್ರೊಡ್ಯೂಸ್ ಮಾಡಿದ್ರೆ ಆಕ್ಟ್ ಮಾಡ್ತೇನೆ ಎಂದು ನಗುತ್ತಲೇ ಉತ್ತರಿಸಿದರು.
ಮುಖ್ಯಮಂತ್ರಿ ಮಾತನಾಡುವಾಗ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಏನೋ ಹೇಳಲು ಎದ್ದರು. ತಕ್ಷಣವೇ ಮಧ್ಯ ಪ್ರವೇಶಿಸಿದ ಈಶ್ವರಪ್ಪ, ‘ನೀವು ಸರಿಯಾದ ದಾರಿಯಲ್ಲೇ ಹೋಗುತ್ತಿದ್ದೀರಿ. ಅಡ್ಡ ದಾರಿ ಹಿಡಿಸುವವರ ಬಗ್ಗೆ ಎಚ್ಚರಿಕೆಯಿಂದ ಇರಿ’ ಎಂದರು.
ನನ್ನನ್ನು ಅಡ್ಡ ದಾರಿ ಹಿಡಿಸಲು ಆಗುವುದಿಲ್ಲ. ಸರಿಯಾದ ಮಾಹಿತಿ ನೀಡಬೇಕು ಅಷ್ಟೇ. ಉಗ್ರಪ್ಪನ ಮಾತು ಕೇಳಿ ಎಲ್ಲಿಯೂ ದಾರಿ ತಪ್ಪಿಲ್ಲ. ಅವರ ಮಾತನ್ನು ಎಲ್ಲರೂ ಕೇಳುತ್ತಾರೆ’ ಎಂದು ಸಿದ್ದರಾಮಯ್ಯ ತಿಳಿಸಿದರು.