ಹೈಕಮಾಂಡ್ ಗೆ ಕಪ್ಪ ಪ್ರಕರಣ: ಗೋವಿಂದರಾಜು ತಪ್ಪೊಪ್ಪಿಗೆ ವರದಿ ತಳ್ಳಿ ಹಾಕಿದ ಸಿಎಂ

ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ನೀಡಿದ ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ....
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ನೀಡಿದ ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಅವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ನಿನ್ನೆ ರಾತ್ರಿ ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಡೈರಿಯಲ್ಲಿ ನಮೂದಿಸಲಾದ ಕೆಲವು ಸಂಕ್ಷಿಪ್ತ ರೂಪದ ಹೆಸರುಗಳು ಕಾಂಗ್ರೆಸ್ ನಾಯಕರದ್ದೆ ಎಂದು ಸಿಎಂ ಆಪ್ತ ಗೋವಿಂದರಾಜು ಅವರು ಒಪ್ಪಿಕೊಂಡಿದ್ದಾರೆ ಎಂದು ವರದಿ ಮಾಡಿತ್ತು. 
ಈ ಕುರಿತು ಇಂದು ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಅವರು ತಪ್ಪೊಪ್ಪಿಕೊಂಡಿರುವ ಬಗ್ಗೆ ನಿಮ್ಮ ಬಳಿ ದಾಖಲೆಗಳಿವೆಯೇ? ಎಂದು ಮರು ಪ್ರಶ್ನಿಸಿದರು. 
ರಾಷ್ಟ್ರೀಯ ಮಾಧ್ಯಮ ತನ್ನ ಬಳಿ ದಾಖಲೆಗಳಿವೆ ಎಂದು ಹೇಳುತ್ತಿದೆ ಎಂದಾಗ, 'ಅವರ ಬಳಿ ದಾಖಲೆ ಇದ್ದರೆ ಅದನ್ನು ಬಹಿರಂಗ ಪಡಿಸಲಿ ಎಂದರು. ಅಲ್ಲದೆ ಅದೆಲ್ಲಾ ಸುಳ್ಳು ಸುದ್ದಿ ಎಂದು ಸಿಎಂ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋವಿಂದರಾಜು ಅವರು, ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ಬರುತ್ತಿರುವುದೆಲ್ಲಾ ಸುಳ್ಳು. ಆ ಡೈರಿ ನನಗೆ ಸೇರಿದ್ದಲ್ಲ. ನಾನು ಅಧಿಕಾರಿಗಳ ಮುಂದೆಯೂ ಇದಕ್ಕೆ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದಾನೆ. ರಾಜಕೀಯವಾಗಿ ನನ್ನ ತೇಜೋವಧೆಗೆ ಯತ್ನಿಸಲಾಗುತ್ತಿದೆ ಎಂದಿದ್ದಾರೆ.
ಕಳೆದ ವರ್ಷ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯೂ ಆಗಿರುವ ಗೋವಿಂದರಾಜು ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾಗ ಡೈರಿಯೊಂದು ಪತ್ತೆಯಾಗಿತ್ತು. ಡೈರಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕಪ್ಪ ನೀಡಿರುವ ಉಲ್ಲೇಖವಿದೆ ಎನ್ನಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com