ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಚುನಾವಣೆ ಎದುರಿಸಿ: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಮತ್ತೆ ಸರಣಿ ಸಭೆಗಳನ್ನು ಆರಂಭಿಸಿದ್ದಾರೆ. ಬಳ್ಳಾರಿ, ಚಿಕ್ಕಬಳ್ಳಾಪುರ, ವಿಜಯಪುರ ಹಾಗೂ ಹಾಸನ ...
ಕೆ.ಸಿ ವೇಣುಗೋಪಾಲ್
ಕೆ.ಸಿ ವೇಣುಗೋಪಾಲ್
ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮತ್ತೆ ಸರಣಿ ಸಭೆಗಳನ್ನು ಆರಂಭಿಸಿದ್ದಾರೆ. ಬಳ್ಳಾರಿ, ಚಿಕ್ಕಬಳ್ಳಾಪುರ, ವಿಜಯಪುರ ಹಾಗೂ ಹಾಸನ ಜಿಲ್ಲಾ ಮುಖಂಡರ ಜೊತೆ  ಮಂಗಳವಾರ ಪ್ರತ್ಯೇಕ ಸಭೆ ನಡೆಸಿದರು. ಈ ವೇಳೆ ಕೆಲ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಜರಿದ್ದರು. 
ಬಳ್ಳಾರಿ ಜಿಲ್ಲೆಯಲ್ಲಿ ಲಾಡ್‌ ಸಹೋದರರ ಗೊಂದಲ ಇನ್ನೂ ಮುಂದುವರಿದಿದೆ. ಜಿಲ್ಲೆಯ ಶಾಸಕರು ಮತ್ತು ಮುಖಂಡರು, ಸಚಿವ ಸಂತೋಷ್‌ ಲಾಡ್‌ ಕಾರ್ಯವೈಖರಿಯ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಪಕ್ಷದ ಹಾಲಿ ಶಾಸಕರಿಗೆ ಗೌರವ ನೀಡದೇ, ವಿರೋಧಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಹೀಗಾದರೆ, ಜಿಲ್ಲೆಯಲ್ಲಿ
ಪಕ್ಷವನ್ನು ಬಲಪಡಿಸುವುದು ಹೇಗೆ ಎಂದು ಶಾಸಕರು ಪ್ರಶ್ನಿಸಿದ್ದಾರೆ.
ಸಹೋದರನ ಮೇಲೆ ಅನಿಲ್‌ ಲಾಡ್‌ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಸಂತೋಷ್‌ ಲಾಡ್‌ ತಮ್ಮನ್ನು ಯಾವುದಕ್ಕೂ ಪರಿಗಣಿಸುವುದಿಲ್ಲ. ಜಿಲ್ಲೆಯ ಯಾವುದೇ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಮ್ಮದೇ ದಾರಿ ತುಳಿಯುತ್ತಿದ್ದಾರೆ. ಪಕ್ಷದಲ್ಲಿ ಶಾಸಕರನ್ನು ಗೌರವದಿಂದ ಕಾಣಬೇಕು. ಇಲ್ಲದಿದ್ದರೆ, ಮುಂದಿನ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಮನ್ನಯ ಸಮಿತಿ ಸಭೆ ರಚಿಸಲಾಗುವುದು ಎಂದು ವೇಣುಗೋಪಾಲ್ ಭರವಸೆ ನೀಡಿದ್ದಾರೆ.
ಸಂತೋಷ್ ಲಾಢ್ ಸಹೋದರ ಅನಿಲ್ ವಿರುದ್ಧ ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಹೀಗಾಗಿ ಸಹೋದರರಿಗೆ ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆಯಲ್ಲಿ ತೊಡಗುವಂತೆ  ವೇಣುಗೋಪಾಲ್ ಸೂಚಿಸಿದ್ದಾರೆ. ಏನೇ ಅಸಮಾಧಾನ ಇದ್ದರೂ ಬಹಿರಂಗ ಹೇಳಿಕೆ ನೀಡದೆ, ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.
ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯಕರ್ತರ ಜೊತೆ ವೇಣುಗೋಪಾಲ್ ಮಾತುಕತೆ ನಡೆಸಿದರು. ಈ ವೇಳೆ ಸಂಸದ ವೀರಪ್ಪ ಮೊಯ್ಲಿ ಹಾಜರಿದ್ದರು. ವೀರಪ್ಪ ಮೊಯ್ಲಿ ಸ್ವತಂತ್ರ್ಯ ಅಭ್ಯರ್ಥಿ ಕೃಷ್ಣಾ ರೆಡ್ಡಿ ಅವರನ್ನು ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು  ಬಾಗೇಪಲ್ಲಿ ಮಾಜಿ ಶಾಸಕ ಎನ್ ಸಂಪಂಗಿ ಮೊಯ್ಲಿ ವಿರುದ್ಧ ದೂರಿದ್ದಾರೆ. ಈ ಸಂಬಂಧ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ವೇಣು ಗೋಪಾಲ್ ಹೇಳಿದ್ದಾರೆ.
ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್, ಮತ್ತು ವಿಜಯಪುರ ಶಾಸಕ ಎಂಬಿ ಪಾಟೀಲ್, ಅವರವರ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಹರಿಸಬೇಕೆಂದು  ಸೂಚಿಸಿದ್ದಾರೆ. ಹಾಸನ  ಜಿಲ್ಲಾ ಉಸ್ತುವಾರಿ ಸಚಿವ, ಎ. ಮಂಜು,ಡಿಸಿಸಿ ಅಧ್ಯಕ್ಷ ಬಿ ಶಿವರಾಂ, ವೋಣುಗೋಪಾಲ್ ಅವರನ್ನು ಭೇಟಿ ಮಾಡಿದ್ದರು. ಮಂಜು ಮತ್ತು ಶಿವರಾಂ ಕೇವಲ ಒಕ್ಕಲಿಗ ಸಮುದಾಯದ ಮುಖಂಡರನ್ನು ಆಯಕಟ್ಟಿನ ಜಾಗಕ್ಕೆ ತರುತ್ತಿದ್ದಾರೆ ಎಂದು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com