
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದಿದ್ದು, 13 ಅತೃಪ್ತ ನಾಯಕರು ಪ್ರತ್ಯೇಕ ಸಭೆ ನಡೆಸುವ ಮೂಲಕ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಸೋಮವಾರ ಸಭೆ ನಡೆಸಿದ ಅತೃಪ್ತರ ಗುಂಪು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಪದಾಧಿಕಾರಿಗಳ ಪಟ್ಟಿ ಬದಲಾವಣೆ ಮತ್ತು ಕೆಲವು ನಾಯಕರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯುವುದು ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಅತೃಪ್ತ ನಾಯಕರು ಇದೇ 15ರವರೆಗೆ ಗಡುವು ನೀಡಿದ್ದಾರೆ. ಅಷ್ಟರೊಳಗೆ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಸಚಿವ ಸೊಗಡು ಶಿವಣ್ಣ ಮತ್ತು ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ನೇತೃತ್ವದಲ್ಲಿ 20 ವಿವಿಧ ಜಿಲ್ಲೆಗಳ ಮುಖಂಡರು ಸಭೆ ನಡೆಸಿದರು. ಈ ಹಿಂದೆ ಅಮಿತ್‌ಷಾ ಅವರ ಸಮ್ಮುಖದಲ್ಲಿ ಚರ್ಚೆ ನಡೆದಾಗ ಸಮಸ್ಯೆಯನ್ನು ಬಗೆಹರಿಸಲು ಯಡಿಯೂರಪ್ಪ, ಮುರುಳೀಧರರಾವ್, ಸಂತೋಷ್ ಮತ್ತು ಅರುಣ್ ಕುಮಾರ್ ಅವರನ್ನು ಒಳಗೊಂಡ ನಾಲ್ವರ ಸಮಿತಿ ರಚಿಸಲಾಗಿತ್ತು. ಇಲ್ಲಿಯವರೆಗೂ ಸಮಿತಿ ಸಭೆ ಕರೆದಿಲ್ಲ ಎಂದು ಆರೋಪಿಸ ಭಾನುಪ್ರಕಾಶ್, ನಾವು ಈಶ್ವರಪ್ಪ ಗುಂಪಿನವರೂ ಅಲ್ಲ. ರಾಯಣ್ಣ ಬ್ರಿಗೇಡ್‌ಗೂ ಸೇರಿದವರಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಪಕ್ಷಕ್ಕೆ ಯಾವುದೇ ರೀತಿಯಲ್ಲಿ ನಷ್ಟವನ್ನೂ ಮಾಡುವುದಿಲ್ಲ ಎಂದು ಹೇಳಿದರು.
ಅಮಿತ್ ಶಾ ಅವರ ಆದೇಶವನ್ನು ಅನುಷ್ಠಾನಗೊಳಿಸಲು ಮಾರ್ಚ್ 15ರ ವರೆಗೆ ಗಡುವು ನೀಡುತ್ತೇವೆ, ಅಷ್ಟರೊಳಗೆ ಯಡಿಯೂರಪ್ಪ ಅತೃಪ್ತರ ಸಭೆ ಕರೆದು ಸಮಾಲೋಚಿಸಿ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮಾಡಬೇಕು ಇಲ್ಲವಾದಲ್ಲಿ ಯಡಿಯೂರಪ್ಪ ಅವರು ಸೋಮವಾರದಿಂದ ಆರಂಭಿಸಿರುವ ಜಿಲ್ಲಾ ಪದಾಧಿಕಾರಿಗಳು ಮತ್ತು ಪ್ರಮುಖರ ಸಭೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Advertisement