2018ರ ವಿಧಾನಸಭೆ ಚುನಾವಣೆ: ಮತದಾರರ ಮನಸ್ಥಿತಿ ಅರಿಯಲು ಕಾಂಗ್ರೆಸ್, ಬಿಜೆಪಿ ಸಮೀಕ್ಷೆ

2018ರ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಮನಸ್ಥಿತಿ ಅರಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸಮೀಕ್ಷೆಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: 2018ರ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಮನಸ್ಥಿತಿ ಅರಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸಮೀಕ್ಷೆಗೆ ಮುಂದಾಗಿವೆ.
ರಾಜ್ಯದ ಮತದಾರರ ಮನಸ್ಥಿತಿ ಸಮೀಕ್ಷೆಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮಿತಿ ರಚಿಸುತ್ತಿದ್ದು, ಜೂನ್ ಮೂರನೇ ವಾರದಲ್ಲಿ ಅಂತ್ಯಗೊಳ್ಳಲಿದೆ. ಪ್ರತಿಯೊಂದು ವಿಧಾನಸಭೆ ಮಟ್ಟದಲ್ಲೂ ಸ್ಥೂಲವಾಗಿ ಸಮೀಕ್ಷೆ ನಡೆಸಿ ಪಕ್ಷದ ಇಮೇಜ್ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುವುದು.
ಸ್ಥಳೀಯ ಶಾಸಕರ ಬಗ್ಗೆ ಜನರಿಗಿರುವ ಅಭಿಪ್ರಾಯ, ಗೌರವ, ತಳ ಮಟ್ಟದ ಕಾರ್ಯಕರ್ತ ಕೂಡ ಶಾಸಕರನ್ನು ಒಪ್ಪಿಕೊಂಡಿದ್ದಾನೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಇದೆಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದನ್ನು ನಾಲ್ಕು ಹಂತಗಳಲ್ಲಿ ಸಮೀಕ್ಷೆ ನಡೆಸಲಾಗುವುದು, ರಾಜ್ಯ ಬಿಜೆಪಿ ಘಟಕದ ಯಾರೋಬ್ಬರನ್ನು ನಿಯೋಗಕ್ಕೆ ಸೇರಿಸಿಕೊಳ್ಳದೇ ಸಮೀಕ್ಷೆ ನಡೆಸಲಾಗುವುದು. ಬೂತ್ ಮಟ್ಟದಲ್ಲಿ ಮಾಹಿತಿ ಕಲೆ ಹಾಕಲಾಗುವುದು.
ಮೊದಲಿಗೆ ಸಮೀಕ್ಷೆ ಮಾಹಿತಿಯನ್ನು ರಾಜ್ಯ ಬಿಜೆಪಿ ಆಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರಿಗೆ ನೀಡಲಾಗುವುದು, ನಂತರ ಈ ಎಲ್ಲಾ ಮಾಹಿತಿಯನ್ನು ರಾಷ್ಟ್ರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗುವುದು.
ಆಗಸ್ಟ್ ತಿಂಗಳಲ್ಲಿ ಅಮಿತ್ ಶಾ ಅವರಿಗೆ ಬಿಜೆಪಿ ಮೊದಲ ಪಟ್ಟಿ ಸಿದ್ಧಗೊಳಿಸಲಾಗುವುದು. ಚುನಾವಣೆ ಹತ್ತಿರ  ಸಮೀಪಿಸುತ್ತಿದ್ದ ಹಾಗೆ ಜಾತಿ ಗಣತಿ, ಸಾಲ ಮರು ಪಾವತಿ ಸಾಧ್ಯತೆ ಸೇರಿದಂತೆ ಹಲವು ವಿಷಯಗಳ ಬಗ್ಗೆಯೂ ಬಿಜೆಪಿ ಸಮೀಕ್ಷೆ ನಡೆಸಲಿದೆ.
ಇನ್ನೂ ಕಾಂಗ್ರೆಸ್ ಪಕ್ಷ ಕೂಡ ಎರಡು ಸಮೀಕ್ಷೆ ನಡೆಸಲಿದೆ. ಒಂದು ಸಮೀಕ್ಷೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಲಿದ್ದಾರೆ, ಮತ್ತೊಂದು ಸಮೀಕ್ಷೆಯನ್ನು ಕೆಪಿಸಿಸಿ ನಡೆಸಲಿದೆ. ಕಾಂಗ್ರೆಸ್ ಕೂಡ ವಿಧಾನಸಭೆ ಕ್ಷೇತ್ರಗಳ ಮಟ್ಟದಲ್ಲಿ ಸಮೀಕ್ಷೆ ನಡೆಸಿ ಪ್ರಸಕ್ತ ಶಾಸಕರ ಬಗ್ಗೆ ಜನರಿಗಿರುವ ಅಭಿಪ್ರಾಯಗಳನ್ನು ಸಂಗ್ರಹಿಸಲಿದೆ.
ಎಲ್ಲಾ ಜಿಲ್ಲೆಗಳಲ್ಲೂ ಮೂರು ಹಂತಗಳಲ್ಲಿ ಸಮೀಕ್ಷೆ ನಡೆಯಲಿದೆ. ಇದೇ ರೀತಿ ಸಮೀಕ್ಷೆಗಳನ್ನು ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆಗಳ ವೇಳೆ ನಡೆಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com