ದೆಹಲಿ: ಕೆಪಿಸಿಸಿ ಅಧ್ಯಕ್ಷ ಹುದ್ದೆಗಾಗಿ ಖರ್ಗೆ ಬೆಂಬಲ ಪಡೆಯಲು ಡಿಕೆಶಿ ಲಾಬಿ!

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಮುಂದುವರಿದಿದೆ. ಈ ಸಂಬಂಧ ಇಂದು ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು ..
ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ ಶಿವಕುಮಾರ್
ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ ಶಿವಕುಮಾರ್
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಮುಂದುವರಿದಿದೆ. ಈ ಸಂಬಂಧ ಇಂದು ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು ತಮ್ಮನ್ನು ಬೆಂಬಲಿಸುವಂತೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಸಂಸದ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ  ನಿವಾಸದಲ್ಲಿ ಭಾನುವಾರ ಖರ್ಗೆ ಅವರನ್ನು ಭೇಟಿ ಮಾಡಿರುವ ಡಿಕೆ ಶಿವಕುಮಾರ್ ಸುಮಾರು 30 ನಿಮಿಷಗಳ  ಕಾಲ ಚರ್ಚೆ ನಡೆಸಿದರು. ಆದರೆ  ಖರ್ಗೆ ನಿವಾಸದಿಂದ ಹೊರಬಂದ ಡಿಕೆಶಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. 
ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದ್ದು, ಅದಕ್ಕಾಗಿ ಡಿಕೆಶಿ ಲಾಬಿ ನಡೆಸಿದ್ದಾರೆ. ಸೋಮವಾರ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯಕ್ಕೆ ಆಗಮಿಸಿದ್ದ ವೇಣುಗೋಪಾಲ್ 5 ದಿನಗಳ ಕಾಲ ಪ್ರವಾಸ ಮಾಡಿ ವರದಿಯನ್ನು ಈಗಾಗಲೇ ಹೈಕಮಾಂಡ್ ಗೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ ಪರಮೇಶ್ವರ್ ಹಾಗೂ ಡಿ.ಕೆ ಶಿವಕುಮಾರ್ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ.
ಇದೇ ವೇಳೆ ಪರಮೇಶ್ವರ್ ಅವರೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಬೇಕೆಂದು ಅವರ ಬೆಂಬಲಿಗರು ಕೆ,ಸಿ ವೇಣುಗೋಪಾಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ. 
ಡಿಕೆ ಶಿವಕುಮಾರ್ ಅವರನ್ನು ಹೊರತು ಪಡಿಸಿ, ಮಾಜಿ ಸಚಿವ ಎಸ್ ಆರ್ ಪಾಟೀಲ್, ಮತ್ತು ಹಿರಿಯ ಸಂಸದ ಕೆ.ಎಚ್ ಮುನಿಯಪ್ಪ ಕೂಡ ಹುದ್ದೆಯ ಆಕಾಂಕ್ಷಿಗಳಾಗಿದ್ದು, ಸಿಎಂ ಸಿದ್ದರಾಮಯ್ಯ ಎಸ್ ಆರ್ ಪಾಟೀಲ್ ಪರ ಒಲವು ಹೊಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com