ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಭ್ರಷ್ಟಾಚಾರ ಕುರಿತು ಮುಕ್ತ ಚರ್ಚೆಗೆ ಯಡಿಯೂರಪ್ಪರನ್ನು ಆಹ್ವಾನಿಸಿದ ಮುಖ್ಯಮಂತ್ರಿ

ಭ್ರಷ್ಟಾಚಾರ ಆರೋಪ ಕುರಿತು ಮುಕ್ತ ಚರ್ಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಇತರ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ...
Published on
ಬೆಂಗಳೂರು: ಭ್ರಷ್ಟಾಚಾರ ಆರೋಪ ಕುರಿತು ಮುಕ್ತ ಚರ್ಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಇತರ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನಿಸಿದ್ದಾರೆ.
ಭ್ರಷ್ಟಾಚಾರ ಆರೋಪದ ಬಗ್ಗೆ ಮುಕ್ತ ಸಾರ್ವಜನಿಕ ಚರ್ಚೆಗೆ ಬರುವಂತೆ ನಾನು ಬಿಜೆಪಿ ಮುಖಂಡರನ್ನು ಕರೆಯುತ್ತೇನೆ, ಆದರೆ ಅವರಿಗೆ ಬರಲು ಧೈರ್ಯವಿಲ್ಲ ಎಂದು ಟೀಕಿಸಿದರು.
ಅವರು ನಿನ್ನೆ ಬೆಂಗಳೂರಿನ ವಿಜಯನಗರ ಮತ್ತು ಗೋವಿಂದರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ಭ್ರಷ್ಟಾಚಾರದ ಆರೋಪದ ಮೇಲೆ ಹಲವು ಬಿಜೆಪಿ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ ಅವರಿಗೆ ನಾಚಿಕೆಯಿಲ್ಲ. ಯಡಿಯೂರಪ್ಪನವರಿಂದ ಹಿಡಿದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹಾಲಪ್ಪ, ಜನಾರ್ದನ ರೆಡ್ಡಿ ಮತ್ತು ಆನಂದ್ ಸಿಂಗ್ ಅವರವರೆಗೆ ಜೈಲಿಗೆ ಹೋದವರೇ. ವಿಧಾನಸಭೆ ಕಲಾಪದ ವೇಳೆ ಪೋರ್ನ್ ಸಿನಿಮಾ ನೋಡಿ ಸಿಕ್ಕಿಹಾಕಿಕೊಂಡು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇದು ಬಿಜೆಪಿಯವರ ಸಂಸ್ಕೃತಿ ಎಂದು ಟೀಕಿಸಿದರು.
ಪಕ್ಷ ಅಧಿಕಾರಕ್ಕೆ ಬರಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮ್ಯಾಜಿಕ್ ಕೆಲಸ ಮಾಡುತ್ತದೆ ಎಂದು ಇಲ್ಲಿನ ಬಿಜೆಪಿ ನಾಯಕರು ಅಂದುಕೊಂಡಿದ್ದಾರೆ. ಆದರೆ ಅದು ನಡೆಯುವುದಿಲ್ಲ. ಅಮಿತ್ ಶಾ ಅವರ ಮ್ಯಾಜಿಕ್ ಕರ್ನಾಟಕದಲ್ಲಿ ನಡೆಯುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ 16 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಆದರೆ ಬಡವರ ಪರ ಯಾವ ಬಿಜೆಪಿ ಸರ್ಕಾರಗಳು ಯೋಜನೆಗಳನ್ನು ಆರಂಭಿಸಿವೆ? ಕರ್ನಾಟಕವನ್ನು ಹಸಿವು ಮುಕ್ತ ಮಾಡಲು ನಾವು ಪ್ರಯತ್ನಪಟ್ಟಿದ್ದೇವೆ ಎಂದು ಸಿದ್ದರಾಮಯ್ಯ ನುಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com