ಬಿಜೆಪಿ ಮುಖಂಡನ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ: ಬಿಎಸ್ ವೈ ಒತ್ತಾಯ

ಧಾರವಾಡದಲ್ಲಿ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಅವರ ಕೊಲೆ ಪ್ರಕರಣದಲ್ಲಿ....
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ಧಾರವಾಡದಲ್ಲಿ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಅವರ ಕೊಲೆ ಪ್ರಕರಣದಲ್ಲಿ ಗಣಿಗಾರಿಕೆ ಸಚಿವ ವಿನಯ್ ಕುಲಕರ್ಣಿ ಅವರ ಹೆಸರು ಕೇಳಿಬರುತ್ತಿದ್ದು ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿಕ್ಕಿರುವ ಆಡಿಯೊ ಕ್ಲಿಪ್ ನಲ್ಲಿ ಸಚಿವ ವಿನಯ್ ಕುಲಕರ್ಣಿಯವರು ಯೋಗೀಶ್ ಗೌಡರ ಪರ ವಕೀಲರಿಗೆ ಬೆದರಿಕೆಯೊಡ್ಡುತ್ತಿರುವ ಮಾತು ಬಲವಾದ ಸಾಕ್ಷ್ಯಗಳನ್ನು ಒದಗಿಸುತ್ತಿದೆ. ಇದರಲ್ಲಿ ವಿನಯ್ ಕುಲಕರ್ಣಿಯವರ ಪಾತ್ರವಿರುವುದು ಕಂಡುಬರುತ್ತಿರುವುದರಿಂದ ಈ ಕೂಡಲೇ ಸಂಪುಟದಿಂದ ವಿನಯ್ ಕುಲಕರ್ಣಿಯವರನ್ನು ಕೈ ಬಿಟ್ಟು ನಿಸ್ಪಕ್ಷಪಾತ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕು ಎಂದು ಹೇಳಿದರು.
ವಿನಯ್ ಕುಲಕರ್ಣಿಯವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಒತ್ತಾಯಿಸಿ ನಾಳೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಅದರ ಜೊತೆಗೆ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿರುವುದರಿಂದ ಅವರನ್ನು ಕೂಡ ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಬಿಜೆಪಿ ಒತ್ತಾಯಿಸಲಿದೆ.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುನ್ನ ಡಿವೈಎಸ್ಪಿ ಗಣಪತಿಯವರು ಸಚಿವ ಜಾರ್ಜ್ ಅವರ ಹೆಸರನ್ನು ಹೇಳಿದ್ದರೂ ಕೂಡ ಸಿದ್ದರಾಮಯ್ಯ ಅವರನ್ನು ರಕ್ಷಿಸುತ್ತಾ ಬಂದಿದ್ದಾರೆ. ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಕೂಡ ತಮ್ಮ ಸಂಪುಟ ಸಚಿವರಾದ ವಿನಯ್ ಕುಲಕರ್ಣಿಯವರ ಬಗ್ಗೆ ಮುಖ್ಯಮಂತ್ರಿಯವರು ಮೌನ ವಹಿಸಿದ್ದಾರೆ. ಇದರಿಂದ ಸಿದ್ದರಾಮಯ್ಯನವರ ನಿಲುವೇನು ಎಂಬುದು ಗೊತ್ತಾಗುತ್ತದೆ ಎಂದು ಅವರು ಆರೋಪಿಸಿದರು.
ಸಚಿವ ಕುಲಕರ್ಣಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಯಡಿಯೂರಪ್ಪ, ಕೇಸನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲು ವಿನಯ್ ಕುಲಕರ್ಣಿ ಯತ್ನಿಸುತ್ತಿದ್ದಾರೆ. ಕೇಸನ್ನು ನೋಡಿಕೊಳ್ಳುತ್ತಿರುವ ವಕೀಲರಿಗೆ ದೂರವಾಣಿ ಮೂಲಕ ಬೆದರಿಕೆಯೊಡ್ಡಿದ್ದಾರೆ. ಡಿವೈಎಸ್ಪಿ ತುಲಜಪ್ಪ ಸುಲ್ಫಿ ಅವರ ಮೂಲಕ ಯೋಗೀಶ್ ಗೌಡರ ಪತ್ನಿಗೆ ಬೆದರಿಕೆಯೊಡ್ಡಿ ಯಾರ ಹೆಸರನ್ನು ಬಹಿರಂಗಪಡಿಸದಂತೆ ಹೇಳಿದ್ದಾರೆ. ಯೋಗೀಶ್ ಗೌಡರ ಸೋದರ ಗುರುನಾಥ್ ಗೌಡ ಅವರ ಜೊತೆ ಕೂಡ ಸಚಿವರು ದೂರವಾಣಿ ಮೂಲಕ ಮಾತನಾಡಿ ಒತ್ತಡ ಹಾಕಿದ್ದಾರೆ.
ಇವೆಲ್ಲವೂ ಸಾಕ್ಷಿಗಳನ್ನು ನಾಶಮಾಡುವ ಅವರ ಪ್ರಯತ್ನವನ್ನು ತೋರಿಸುತ್ತದೆ. ಇವೆಲ್ಲದರ ಅಗತ್ಯವೇನಿದೆ? ಹೀಗಾಗಿ ಘಟನೆಯನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಮತ್ತು ಡಿವೈಎಸ್ಪಿ ಸುಲ್ಫಿ ಅವರನ್ನು ಸೇವೆಯಿಂದ ವಜಾ ಮಾಡಿ ಇಲಾಖಾವಾರು ತನಿಖೆ ನಡೆಸಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com