ಕುರ್ಚಿ ಬಿಟ್ಟುಕೊಡದ ಚಿತ್ರದುರ್ಗ ಜಿ.ಪಂ ಅಧ್ಯಕ್ಷೆ ಸೌಭಾಗ್ಯ ಕಾಂಗ್ರೆಸ್ ನಿಂದ ಉಚ್ಛಾಟನೆ

ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸ್ಥಾನ ಬಿಟ್ಟುಕೊಡಲು ನಿರಾಕರಿಸುತ್ತಿರುವ ಸೌಭಾಗ್ಯ ಬಸವರಾಜನ್ ಅವರನ್ನು ಪಕ್ಷ....
ಸೌಭಾಗ್ಯ ಬಸವರಾಜನ್
ಸೌಭಾಗ್ಯ ಬಸವರಾಜನ್
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸ್ಥಾನ ಬಿಟ್ಟುಕೊಡಲು ನಿರಾಕರಿಸುತ್ತಿರುವ ಸೌಭಾಗ್ಯ ಬಸವರಾಜನ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವದಿಂದ ಬುಧವಾರ ಉಚ್ಛಾಟಿಸಲಾಗಿದೆ.
ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಒತ್ತಾಯಿಸಿ ಕಳೆದ ನಾಲ್ಕು ತಿಂಗಳಿಂದ ಸೌಭಾಗ್ಯ ಬಸವರಾಜನ್ ಅವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಇದ್ಯಾವುದನ್ನೂ ಲೆಕ್ಕಿಸದೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿರುವ ಸೌಭಾಗ್ಯ ಅವರನ್ನು ಇಂದು ಪಕ್ಷದಿಂದ ಉಚ್ಛಾಟಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ವೇಳೆ ಪಕ್ಷದ ಮುಖಂಡರು ಮತ್ತು ಹಿರಿಯರ ಸಮ್ಮುಖದಲ್ಲಿ ನಡೆದ ಸಭೆಯ ಒಪ್ಪಂದಂತೆ 15 ತಿಂಗಳ ಅಧಿಕಾರಾವಧಿ ನಂತರವೂ ಅಧ್ಯಕ್ಷ ಸ್ಥಾನಬಿಟ್ಟುಕೊಡದೇ, ಮುಖಂಡರ ಸೂಚನೆಗೂ ಸ್ಪಂದಿಸದ ಕಾರಣ, ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನುರದ್ದುಗೊಳಿಸಿ, ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ವಿ.ವೈ.ಘೋರ್ಪಡೆ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಐದು ವರ್ಷದ ಅವಧಿಯ ಅಧಿಕಾರವನ್ನು ತಲಾ 15 ತಿಂಗಳಿನಂತೆ ನಾಲ್ವರು ಮಹಿಳೆಯರಿಗೆ ಹಂಚಿಕೆ ಒಡಂಬಡಿಕೆ ಮಾಡಲಾಗಿತ್ತು. ಮೊದಲ ಅವಧಿಗೆ ಅಧ್ಯಕ್ಷ ಸ್ಥಾನವನ್ನು ಸೌಭಾಗ್ಯ ಬಸವರಾಜನ್ ಅವರು ಅಲಂಕರಿಸಿದ್ದರು. ಅವಧಿ ಮುಗಿದರೂ ಸ್ಥಾನ ಬಿಟ್ಟುಕೊಡದ ಕಾರಣ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದ್ದು, ಇದರೊಂದಿಗೆ ಅಧ್ಯಕ್ಷ ಸ್ಥಾನಕ್ಕಾಗಿ ಕಳೆದ ನಾಲ್ಕು ತಿಂಗಳಿಂದ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ತೆರೆಬಿದ್ದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com