ರಾಷ್ಟ್ರಪತಿಗಳಿಗೆ ನಾವು ಭಾಷಣ ಬರೆದುಕೊಡಕಾಗುತ್ತಾ?: ಸಿಎಂ ಸಿದ್ದರಾಮಯ್ಯ

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಭಾಷಣದಿಂದ ಟಿಪ್ಪು ಜಯಂತಿ ವಿವಾದ ಬುಧವಾರ ಹೊಸ ತಿರುವು ಪಡೆದುಕೊಂಡಿದ್ದು....
ಬೆಂಗಳೂರು: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಭಾಷಣದಿಂದ ಟಿಪ್ಪು ಜಯಂತಿ ವಿವಾದ ಬುಧವಾರ ಹೊಸ ತಿರುವು ಪಡೆದುಕೊಂಡಿದ್ದು, ಟಿಪ್ಪು ಸುಲ್ತಾನ್ ಒಬ್ಬ ಅಪ್ರತಿಮ ವೀರನಾಗಿದ್ದ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಎಂದು ರಾಷ್ಟ್ರಪತಿಗಳು ಕೊಂಡಾಡಿರುವುದು ಕಾಂಗ್ರೆಸ್‌ಗೆ ಇನ್ನಷ್ಟು ಉತ್ಸಾಹ ನೀಡಿದರೆ, ಬಿಜೆಪಿಗೆ ತೀವ್ರ ಇರಿಸು ಮುರಿಸು ಉಂಟಾಗಿ ಪೇಚಿಗೆ ಸಿಲುಕುವಂತೆ ಮಾಡಿದೆ. 
ಭಾಷಣವನ್ನು ಸರ್ಕಾರ ಬರೆದುಕೊಟ್ಟಿದ್ದು, ಉದ್ದೇಶ ಪೂರ್ವಕವಾಗಿ ಟಿಪ್ಪು ಹೆಸರನ್ನು ಸೇರಿಸಿ ರಾಷ್ಟ್ರಪತಿಗಳ ಹುದ್ದೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಆರೋಪದ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಷ್ಟ್ರಪತಿಗಳಿಗೆ ನಾವು ಭಾಷಣ ಬರೆದುಕೊಡಕಾಗುತ್ತಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿಗಳಿಗೆ ನಾವು ಭಾಷಣ ಬರೆದುಕೊಡಕಾಗುತ್ತಾ? ಅವರೇ ಭಾಷಣ ಸಿದ್ಧಪಡಿಸಿಕೊಂಡು ಬಂದು ಓದಿದ್ದಾರೆ. ಸರ್ಕಾರ ಭಾಷಣ ಬರೆದುಕೊಡಲು ಸಾಧ್ಯವಿಲ್ಲ. ಇದು ಜಂಟಿ ಅಧಿವೇಶನದ ಭಾಷಣ ಅಲ್ಲ, ಜಂಟಿ ಅಧಿವೇಶನಕ್ಕಾದರೆ ಸರ್ಕಾರ ಬರೆದುಕೊಡುತ್ತೆ. ರಾಷ್ಟ್ರಪತಿಗಳು ಇತಿಹಾಸದಲ್ಲಿ ನಡೆದ ಸತ್ಯವನ್ನೇ ಹೇಳಿದ್ದಾರೆ. ಆದರೆ ಬಿಜೆಪಿಯವರು ಅದನ್ನು ತಿರುಚುತ್ತಿದ್ದಾರೆ. ಅವರಿಗೆ ಸುಲಭವಾಗಿ ಅರ್ಥವಾಗಲ್ಲ ಎಂದು ಸಿಎಂ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಬಿಜೆಪಿಯವರು ಈ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವುದು, ಜನರಿಗೆ ತಪ್ಪು ಮಾಹಿತಿ ನೀಡಲು ಯತ್ನಿಸುತ್ತಿರುವುದು ಅತ್ಯಂತ ಖಂಡನೀಯ ಮತ್ತು ವಿಷಾದನೀಯ' ಎಂದು ಸಿಎಂ ಹೇಳಿದ್ದಾರೆ.
ಇನ್ನು ರಾಷ್ಟ್ರಪತಿಗಳ ಭಾಷಣದ ವೇಳೆ ಮುಖ್ಯಮಂತ್ರಿಗಳ ಹೆಸರಿನಲ್ಲಿ ಮಾಜಿ ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ದೇವೇಗೌಡರ ಹೆಸರು ಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಇದರಲ್ಲಿ ನಮ್ಮ ಪಾತ್ರವೇನು ಇಲ್ಲ. ನಾನಾಗಲಿ, ನನ್ನ ಆಪ್ತರಾಗಲಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಲಿ ಭಾಷಣ ಬರೆದಿಲ್ಲ. ಅವರು ಉದ್ದೇಶ ಪೂರ್ವಕವಾಗಿ ಮರೆತಿರಲಿಕ್ಕಿಲ್ಲ ಎಂದರು. 
ನೋ ಕಮೆಂಟ್ಸ್‌ ಎಂದ ಬಿಎಸ್‌ವೈ!
ರಾಷ್ಟ್ರಪತಿಗಳ ಭಾಷಣದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ವರದಿಗಾರರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪ್ರಶ್ನಿಸಿದಾಗ 'ನೋ ಕಮೆಂಟ್ಸ್‌' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com