ಸಿದ್ಧಗಂಗಾ ಶ್ರೀಗಳ ಹೇಳಿಕೆ ತಿರುಚಿದ್ರೆ ನನ್ನ ಕುಟುಂಬ ಸರ್ವನಾಶವಾಗ್ಲಿ: ಸಚಿವ ಎಂ ಬಿ ಪಾಟೀಲ್

ಪ್ರತ್ಯೇಕ ಲಿಂಗಾಯತ ಧರ್ಮದ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ತುಮಕೂರು ಸಿದ್ಧಗಂಗಾ ಮಠದ ಪೀಠಾಧೀಶ ಶಿವಕುಮಾರ...
ಎಂ ಬಿ ಪಾಟೀಲ್
ಎಂ ಬಿ ಪಾಟೀಲ್
ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮದ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ತುಮಕೂರು ಸಿದ್ಧಗಂಗಾ ಮಠದ ಪೀಠಾಧೀಶ ಶಿವಕುಮಾರ ಸ್ವಾಮೀಜಿ ಅವರ ಹೇಳಿಕೆಯನ್ನು ನಾನು ತಿರುಚಿಲ್ಲ. ಈ ಸಂಬಂಧ ನಾನು ಕ್ಷೇತ್ರದಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಮಂಗಳವಾರ ಸವಾಲು ಹಾಕಿದ್ದಾರೆ. 
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್‌, ನಾನು ಸಿದ್ದಗಂಗಾ ಶ್ರೀಗಳ ಹೇಳಿಕೆ ತಿರುಚಿಲ್ಲ. ಭಾನುವಾರ ಮಠಕ್ಕೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಲು ತೆರಳಿದ್ದೆ. ಈ ವೇಳೆ ಕಿರಿಯ ಶ್ರೀಗಳು ಪ್ರಸಾದ ಮಾಡಿಕೊಂಡು ಹೋಗಲು ಆಹ್ವಾನ ನೀಡಿದ್ದರು. ನಾನು ಕಾರ್ಯ ಒತ್ತಡದಿಂದ ಬೆಂಗಳೂರಿಗೆ ಹೊರಟಿದ್ದೆ. ಸುಮಾರು 1 ಕಿ.ಮೀ ಪ್ರಯಾಣಿಸಿದ ವೇಳೆ ಮಠದ ಅಧಿಕಾರಿಯೊಬ್ಬರು ಕರೆ ಮಾಡಿ ಹಿರಿಯ ಶ್ರೀಗಳು ನಿಮಗೆ ಆಶೀರ್ವಾದ ಮಾಡಲಿದ್ದಾರೆ ಬನ್ನಿ ಎಂದು ಕರೆದಿದ್ದು, ನಾನು ಕೂಡಲೇ ಮಠಕ್ಕೆ ವಾಪಾಸಾಗಿ ಶ್ರೀಗಳ ಆಶೀರ್ವಾದ ಪಡೆದಿದ್ದೆ ಎಂದಿದ್ದಾರೆ.
ನಾನು ಶ್ರೀಗಳ ಬಳಿ ನಮ್ಮ ಹೋರಾಟದ ಬಗ್ಗೆ ಸ್ಪಷ್ಟ ವಿವರಣೆ ನೀಡಿದ್ದೆ. ಆಗ ಶ್ರೀಗಳು ''ಪ್ರತ್ಯೇಕ ಧರ್ಮ ಬೇಕು'' ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಸ್ಪಷ್ಟವಾಗಿ ಕೇಳಿಸಿಕೊಂಡು, ಹೋರಾಟ ಮುಂದುವರಿಸುವುದಾಗಿ ಹೇಳಿ ಆಶೀರ್ವಾದ ಪಡೆದು ಬಂದಿದ್ದೆ' ಎಂದಿದ್ದಾರೆ. 
'ನನ್ನ ತಾಯಿ, ಪತ್ನಿ ಮತ್ತು ಮಕ್ಕಳೊಂದಿಗೆ ಸಿದ್ದಗಂಗಾ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡುತ್ತೇನೆ. ಮಾಧ್ಯಮಗಳ ಎದುರು ಮಠದ ಕಿರಿಯ ಶ್ರೀಗಳು, ಮಠದ ಅಧಿಕಾರಿ ಶಿವಕುಮಾರ್‌ ಅವರ ಎದುರೇ ಪ್ರಮಾಣ ಮಾಡುತ್ತೇನೆ.ಎಲ್ಲಿಯಾದರೂ ನಾನು ಡಾ. ಶಿವಕುಮಾರ ಸ್ವಾಮೀಜಿಗಳ ಹೇಳಿಕೆ  ಒಂದು ಸಣ್ಣ ಸಾಸಿವೆ ಕಾಳಿನಷ್ಟು ತಿರುಚಿದ್ರೆ, ಶ್ರೀಗಳ ಶಾಪ ನಮಗೆ ತಟ್ಟಲಿ. ನಾನು ಸುಳ್ಳು ಹೇಳಿದ್ದರೆ ನನ್ನ ಕುಟುಂಬ ಸರ್ವನಾಶವಾಗಲಿ' ಎಂದು ಸಚಿವರು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಸೋಮಣ್ಣ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಎಂ ಬಿ ಪಾಟೀಲ್ ಅವರು, ಬಿಜೆಪಿ ನಾಯಕರು ಪ್ರತ್ಯೇಕ ಧರ್ಮ ಹೋರಾಟದ ವಿಚಾರದಲ್ಲಿ ಅನಗತ್ಯ ಗೊಂದಲ ಹುಟ್ಟು ಹಾಕಿ ಹೋರಾಟದ ದಾರಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಭಾನುವಾರ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಮಹತ್ವದ ಘಟ್ಟ ತಲುಪಿದ್ದು, ಸಿದ್ಧಗಂಗಾ ಶ್ರೀಗಳೇ ಪ್ರತ್ಯೇಕ ಧರ್ಮಕ್ಕೆ ಬೆಂಬಲ ನೀಡಿದ್ದಾರೆ ಎಂದು ಎಂ.ಬಿ. ಪಾಟೀಲ್‌ ಹೇಳಿದ್ದರು. ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಎಂಬಿ ಪಾಟೀಲ್ ಹೇಳಿಕೆ ಕುರಿತು ಎರಡು ದಿನದಲ್ಲಿ ಸತ್ಯಾಂಶ ಗೊತ್ತಾಗುತ್ತೆ ಎಂದು ಬಿಎಸ್ ವೈ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com