
ಮೈಸೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ವರುಣಾ ಕ್ಷೇತ್ರ ಇಡೀ ರಾಜ್ಯದ ಗಮನಸೆಳೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಮತ್ತು ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುವ ಸಾಧ್ಯತೆಯಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ 30,000 ಮತಗಳ ಅಂತರದಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಗೆದ್ದುಬಂದಿದ್ದರು. ಇದು ಕಾಂಗ್ರೆಸ್ ಗೆ ಸುರಕ್ಷಿತ ಕ್ಷೇತ್ರ ಎಂದು ಹೇಳಲಾಗುತ್ತಿದೆ. ಇಲ್ಲಿ ಕಳೆದ 5 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ರಸ್ತೆ ಅಭಿವೃದ್ಧಿ ವಿದ್ಯುತ್ ಪೂರೈಕೆ, ನೀರಾವರಿ, ಆರೋಗ್ಯ ಮತ್ತು ಇತರ ಕ್ಷೇತ್ರಗಳಿಗೆ 4,000 ಕೋಟಿ ರೂಪಾಯಿಗೂ ಅಧಿಕ ವಿನಿಯೋಗಿಸಿದೆ. ಇಲ್ಲಿ ವೀರಶೈವ, ದಲಿತ, ಕುರುಬರು, ನಾಯಕರು, ಉಪ್ಪಾರ, ಮುಸಲ್ಮಾನ ಜಾತಿಯವರು ಹೆಚ್ಚಾಗಿದ್ದು ಕಾಂಗ್ರೆಸ್ ಗೆ ವರದಾನವಾಗಲಿದೆ.
ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪರ್ಧಿಸಲು ನಿರ್ಧರಿಸಿರುವುದರಿಂದ ಅವರ ಮಗ ಯತೀಂದ್ರಗೆ ವರುಣಾ ಕ್ಷೇತ್ರ ಬಿಟ್ಟುಕೊಡುವ ಸಾಧ್ಯತೆಯಿದೆ. ಇದಕ್ಕೆ ತಕ್ಕವಾಗಿ ಜೆಡಿಎಸ್ ಮತ್ತು ಬಿಜೆಪಿ ಕೂಡ ಪ್ರಬಲ ಸ್ಪರ್ಧಿಗಳನ್ನು ಕಣಕ್ಕಿಳಿಸಲು ಯೋಜಿಸುತ್ತಿದೆ.
ಕಳೆದ 2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ಕ ಪು ಸಿದ್ದಲಿಂಗಸ್ವಾಮಿ ವರುಣಾ ಕ್ಷೇತ್ರದಲ್ಲಿ ಎರಡನೇ ಸ್ಥಾನ ಬಂದಿದ್ದರು. ಸಿದ್ದರಾಮಯ್ಯನವರು 84,385 ಮತಗಳನ್ನು ಗಳಿಸಿದ್ದರೆ ಕೆಜೆಪಿಯ ಕ ಪು ಸಿದ್ದಲಿಂಗಸ್ವಾಮಿ 54,744 ಮತಗಳನ್ನು ಗಳಿಸಿದ್ದರು. ಬಿಜೆಪಿ ಈ ಬಾರಿ ಹೊಸ ಮುಖವನ್ನು ಕಣಕ್ಕಿಳಿಸಲು ಉತ್ಸುಕವಾಗಿದೆ. ತಮ್ಮ ಸೋದರ ರಾಕೇಶ್ ನಿಧನದ ನಂತರ ಸಿದ್ದರಾಮಯ್ಯ ಪುತ್ರ ಯತೀಂದ್ರ ರಾಜಕೀಯಕ್ಕೆ ಬಂದಿರುವುದು. ವರುಣಾ ಕ್ಷೇತ್ರದಲ್ಲಿ ಸಂಚರಿಸಿ ಮತದಾರರ ಒಲವನ್ನು ಪಡೆಯಲು ಪ್ರಯತ್ನಿಸಿದ್ದಾರೆ. ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಕೂಡ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಈ ಕ್ಷೇತ್ರಕ್ಕೆ ಖಂಡಿತವಾಗಿಯೂ ಚುನಾವಣಾ ರಂಗೇರಲಿದೆ.
ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಹೊಸಬರು. ಸ್ಥಳೀಯ ವಿಷಯಗಳ ಕುರಿತು ಇವರಿಗೆ ಜ್ಞಾನದ ಕೊರತೆಯಿರುವುದು ಬಿಜೆಪಿಗೆ ಹಿನ್ನಡೆಯಾಗಲಿದೆ. ನಗರ ಪ್ರದೇಶದ ಮತದಾರರನ್ನು ಸೆಳೆಯುವುದು ಕೂಡ ಬಿಜೆಪಿಗೆ ಇಲ್ಲಿ ಸವಾಲು. ಯತೀಂದ್ರ ಅವರ ಪರಿಚಯ ಕಾಂಗ್ರೆಸ್ ಗೆ ಮುನ್ನಡೆಯಾಗಲಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಮಾಜಿ ಮುಖ್ಯಸ್ಥ ಎಸ್ ಸಿ ಬಸವರಾಜು. ವೀರಶೈವ ದಲಿತರು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ರನ್ನು ಮುನ್ನಡಿಯಿಟ್ಟುಕೊಂಡು ಮತದಾರರನ್ನು ಓಲೈಸಲು ಬಿಜೆಪಿ ತಂತ್ರ ಅನುಸರಿಸುತ್ತಿದೆ. ಮಾಜಿ ಡಿಜಿಪಿ ಶಂಕರ್ ಬಿದರಿ ಅವರ ಹೆಸರು ಕೂಡ ಬಿಜೆಪಿಯಿಂದ ಕೇಳಿಬರುತ್ತಿದೆ.
Advertisement