
ಮೈಸೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರ ಹಲವು ವಿಷಯಗಳಿಗೆ ಗಮನ ಸೆಳೆಯಲಿದೆ. ನಿನ್ನೆ ಮತ್ತೊಂದು ಪ್ರಮುಖ ಬೆಳವಣಿಗೆ ಇಲ್ಲಿ ಕಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಾಜಿ ಐಪಿಎಸ್ ಅಧಿಕಾರಿ ಎಲ್. ರೇವಣಸಿದ್ದಯ್ಯ ಅವರನ್ನು ಭೇಟಿ ಮಾಡಿದ್ದಾರೆ.
ಮೊನ್ನೆ ಭಾನುವಾರ ಮೈಸೂರು ಹೊರವಲಯದ ನಂಜನಗೂಡು ರಸ್ತೆಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಮಾಜಿ ಪೊಲೀಸ್ ಅಧಿಕಾರಿ ಎಲ್.ರೇವಣಸಿದ್ದಯ್ಯನವರನ್ನು ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಭೇಟಿ ಮಾಡಿದ್ದರು.
ಬೆಳಗಿನ ಉಪಹಾರದ ವೇಳೆ ಸುಮಾರು 20 ನಿಮಿಷಗಳ ಕಾಲ ಯತೀಂದ್ರ ರೇವಣಸಿದ್ದಯ್ಯನವರ ಜೊತೆ ಮಾತುಕತೆ ನಡೆಸಿದ್ದು ಯಾವುದೇ ಮಹತ್ವದ ಮಾತುಕತೆ ನಡೆಯಲಿಲ್ಲ ಎಂದು ಸ್ವತಃ ಯತೀಂದ್ರ ತಿಳಿಸಿದ್ದಾರೆ. ನನ್ನ ತಂದೆಯ ಸಲಹೆ ಮೇರೆಗೆ ನಾನು ಇವರನ್ನು ಭೇಟಿ ಮಾಡಲು ಬಂದೆ. ದೆಹಲಿಯಿಂದ ಮರಳಿದ ನಂತರ ನನ್ನ ತಂದೆ ಇವರನ್ನು ಭೇಟಿ ಮಾಡಲಿದ್ದಾರೆ ಎಂದು ಯತೀಂದ್ರ ನಂತರ ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ರೇವಣಸಿದ್ದಯ್ಯ ಹಲವು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರವಿದ್ದಾರೆ. ಬಿಜೆಪಿಯಿಂದ ರೇವಣಸಿದ್ದಯ್ಯನವರಿಗೆ ಹೆಚ್ಚು ಓಲೈಕೆಗಳು ಬರುತ್ತಿರುವುದರಿಂದ ಕಾಂಗ್ರೆಸ್ ನಲ್ಲಿ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಇತ್ತೀಚೆಗೆ ಕಾಂಗ್ರೆಸ್ ನ ಯಾವುದೇ ಸಮಾವೇಶಗಳಲ್ಲಿ ಕೂಡ ಅವರು ಕಾಣಿಸಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯತೀಂದ್ರ ಭೇಟಿ ರೇವಣಸಿದ್ದಯ್ಯನವರ ಓಲೈಕೆಗೆ ಎಂಬ ಮಾತುಗಳು ಕೇಳಿಬರುತ್ತಿವೆ.
ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರೇವಣಸಿದ್ದಯ್ಯ, ರಾಜಕೀಯಕ್ಕೆ ಯುವಕರು ಬರುತ್ತಿರುವುದು ಸಂತೋಷವಾಗುತ್ತಿದೆ. ಚುನಾವಣೆಯಲ್ಲಿ ನನ್ನ ಬೆಂಬಲ ಕೋರಿದ ಯತೀಂದ್ರಗೆ ನಾನು ಶುಭ ಹಾರೈಸಿದೆ. ಸಿದ್ದರಾಮಯ್ಯನವರನ್ನು ನನ್ನನ್ನು ಭೇಟಿ ಮಾಡುವುದರಲ್ಲಿ ಏನೂ ತಪ್ಪಿಲ್ಲ ಎಂದು ಹೇಳಿದರು.
Advertisement