ಬೆಂಗಳೂರು: ಮೇ 12ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು ಬಿಜೆಪಿ ರಾಜ್ಯ ಘಟಕಕ್ಕೆ ಸಹಾಯ ಮಾಡುವ ಸಲುವಾಗಿ ದೇಶಾದ್ಯಂತದ 400 ಕ್ಕೂ ಹೆಚ್ಚು ಆಯ್ದ ಸ್ವಯಂಸೇವಕರು ಬೆಂಗಳೂರಿಗೆ ಆಗಮಿಸಿದ್ದಾರೆ.
ಕರ್ನಾಟಕದ ಚುನಾವಣೆಗೆ ಮೇಲ್ವಿಚಾರಣೆ, ಕಾರ್ಯತಂತ್ರ ರಚನೆ ಮಾಡುವ ಸಲುವಾಗಿ ಉತ್ತರ ಪ್ರದೇಶ, ಗುಜರಾತ್ ವಿಧಾನಸಭೆ ಚುನಾವಣೆಗಾಗಿ ಕೆಲಸ ಮಾಡಿದ್ದ 100 ವೃತ್ತಿಪರ ಸ್ವಯಂಸೇವಕರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಯ್ಕೆ ಮಾಡಿದ್ದಾರೆ.
ಅಮಿತ್ ಶಾ ಅವರಿಂದ ನೇಮಿಸಲ್ಪಟ್ಟ ಹೆಚ್ಚುವರಿ ಸಿಬ್ಬಂದಿಯ ಕಾರಣದಿಂದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಛೇರಿಯು ಈ ದಿನಗಳಲ್ಲಿ ಹೆಚ್ಚಿನ ಜನಸಂದಣಿಯಿಂದ ಕೂಡಿದೆ. "ಇಲ್ಲಿ ಸುಮಾರು 36 ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು ಗುಜರಾತ್, ಮುಂಬೈ ಮತ್ತು ನವದೆಹಲಿಯಿಂದ ಇಲ್ಲಿಗೆ ಜನರು ಆಗಮಿಸಿದ್ದಾರೆ."ಪಕ್ಷದ ಮೂಲಗಳು ತಿಳಿಸಿವೆ.
ಅಮಿತ್ ಶಾ ಅವರ ಖಾಸಗಿ ತಂಡದ 70-80 ಜನರು ರಾಜ್ಯ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರುಗಳು ಪಕ್ಷದ ಕಾರ್ಯಚಟುವಟಿಕೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಪ್ರಮಾನಾದ ಜನರು ಬಾಷಾ ಸಮುದಾಯವನ್ನು ಒಳಗೊಂಡಂತೆ ವಿಭಿನ್ನ ಹಿನ್ನೆಲಯುಳ್ಳ ಜನರನ್ನು ತಲುಪಲು ತಳ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ಮಾಧ್ಯಮ, ಹಣಕಾಸು, ಜಾಹೀರಾತು, ವಿಶ್ಲೇಷಣೆ, ಕ್ಷೇತ್ರದ ಪ್ರೊಫೈಲಿಂಗ್, ಅಭಿಯಾನದ ವಿನ್ಯಾಸ ಸಂಬಂಧ ಸಹಾಯ ಮಾಡಲು ಅಮಿತ್ ಶಾ ಅವರ ವೈಯಕ್ತಿಕ ತಂಡ - ಅಸೋಸಿಯೇಷನ್ ಆಫ್ ಬ್ರಿಲಿಯಂಟ್ ಮೈಡ್ಸ್ (ಎಬಿಎಂ) ಸದಸ್ಯರು ಸಹ ಆಗಮಿಸಿದ್ದಾರೆ.
"ಯುಪಿ ಹಾಗೂ ಗುಜರಾತ್ ನಲ್ಲಿ ಈ ತಂಡ ಅಮಿತ್ ಶಾ ಅವರಿಗೆ ಸಹಾಯ ಮಾಡಿದೆ. ಈಗ ಅವರು ಕರ್ನಾಟಕದಲ್ಲಿದ್ದಾರೆ. ಇಲ್ಲಿ ನಡೆಯುವ ಚುನಾವಣೆ ಬಳಿಕ ಅವರು ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಿಗೆ ತೆರಳಲಿದ್ದಾರೆ" ಹೆಸರು ಹೇಳಲಿಚ್ಚಿಸಿಅದ ಬಿಜೆಪಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಗುಜರಾತ್ ಮೂಲದ ಯುವ ವೃತ್ತಿಪರರು, ಪ್ರತಿ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ಸುಮಾರು 150 ಇಂತಹ ಆಯ್ದ ವೃತ್ತಿಪರರು ಮತ್ತು ಸ್ವಯಂಸೇವಕರನ್ನು ಬೆಂಗಳೂರಿನ ಹೊರಗೆ ನಿಯೋಜಿಸಲಾಗಿದೆ.
"ಚುನಾವಣೆ ವೇಳೆ ಪಕ್ಷದ ಬಲವರ್ಧನೆಗಾಗಿ ಬೇರೆಡೆಯಿಂದ ಸ್ವಯಂಸೇವಕರನ್ನು ಕರೆಸುವುದು ಸಾಮಾನ್ಯ, ಆದರೆ 2013 ರ ಚುನಾವಣೆಯಲ್ಲಿ ನಾವು ನೋಡಿದ್ದಕ್ಕಿಂತಲೂ ಈ ಸಂಖ್ಯೆಯು ಹೆಚ್ಚಾಗಿದೆ" ಎಂದು ಇನ್ನೋರ್ವ ಅಧಿಕಾರಿ ಹೇಳಿದರು.
ಇದರೊಂದಿಗೆ ಬಿಜೆಪಿಯು ಪ್ರತಿ ಲೋಕಸಭಾ ಕ್ಷೇತ್ರದಲ್ಲಿಯೂ ಇಬ್ಬರು ಉಸ್ತುವಾರಿಗಳಿರಲಿದ್ದಾರೆ. ಅದರಲ್ಲಿ ಒಬ್ಬರು ಕರ್ನಾಟಕದವರಾದರೆ ಇನ್ನೊಬ್ಬರು ಹೊರರಾಜ್ಯದವರಾಗಿರಲಿದ್ದಾರೆ. "ಪ್ರತಿ ನಾಲ್ಕು ಅಸೆಂಬ್ಲಿ ಕ್ಷೇತ್ರಗಳಿಗೆ ಪಕ್ಷವು ಒಬ್ಬ ಉಸ್ತುವಾರಿಯನ್ನು ನೇಮಕ ಮಾಡಲಿದೆ.ಇದು ಪೂರ್ಣ ಪ್ರಮಾಣದಲ್ಲಿ ಇನ್ನೂ ಜಾರಿಗೆ ಬರಬೇಕಿದೆ" ಮೂಲಗಳು ತಿಳಿಸಿವೆ.