

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಲಿಂಗಾಯತ ಸಮುದಾಯ ನಾಯಕರೆಂದು ಪರಿಗಣಿಸುವುದಿಲ್ಲ ಎಂದು ರಾಷ್ಟ್ರೀಯ ಬಸವ ಸೇನೆ ಪ್ರತಿಪಾದಿಸಿದೆ.
ಭಾರತೀಯ ಜನತಾ ಪಾರ್ಟಿಗೆ ಲಿಂಗಾಯತರು ಅಷ್ಟೊಂದು ಬೆಂಬಲ ನೀಡುವುದಿಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ಹಲವು ಲಿಂಗಾಯತ ಮುಖಂಡರು ಜನರಿಂದ ಆರಿಸಿ ಬಂದರೂ ಕೂಡ ಕೇಂದ್ರದಲ್ಲಿ ಸಚಿವರಾಗಲಿಲ್ಲ. ಬಿಜೆಪಿ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೂ ಕೂಡ ಲಿಂಗಾಯತರು ಅವರನ್ನು ನಾಯಕರಾಗಿ ಕಾಣುವುದಿಲ್ಲ ಮತ್ತು ಅವರ ಮೇಲೆ ನಂಬಿಕೆ, ಭರವಸೆಗಳನ್ನು ಇಟ್ಟುಕೊಂಡಿಲ್ಲ ಎಂದು ರಾಷ್ಟ್ರೀಯ ಬಸವ ಸೇನೆಯ ಪ್ರಧಾನ ಕಾರ್ಯದರ್ಶಿ ಎಪಿ ಬಸವರಾಜು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಮುನ್ನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ತಿಂಗಳು ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿತ್ತು. ಸರ್ಕಾರದ ನಡೆಗೆ ವಿರೋಧಪಕ್ಷದ ನಾಯಕರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಇದು ಲಿಂಗಾಯತ ಮತ ಸೆಳೆಯುವ ಕಾಂಗ್ರೆಸ್ ನ ಪ್ರಯತ್ನ ಎಂದು ಆರೋಪಿಸಿದ್ದರು.