ನಾಮಪತ್ರ ಹಿಂಪಡೆದ ಶಿರೂರು ಸ್ವಾಮೀಜಿ, ಮುನಿಯಪ್ಪ ಪುತ್ರಿ, ಮಂಜುನಾಥ್

ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಶುಕ್ರವಾರ ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ.
ಶ್ರೀ ಲಕ್ಷ್ಮಿವರ ತೀರ್ಥ
ಶ್ರೀ ಲಕ್ಷ್ಮಿವರ ತೀರ್ಥ
ಉಡುಪಿ/ಕೋಲಾರ: ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿರೂರು ಮಠದ ಶ್ರೀ  ಲಕ್ಷ್ಮೀವರತೀರ್ಥ ಸ್ವಾಮೀಜಿ ಶುಕ್ರವಾರ ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ತಮ್ಮ ಬೆಂಬಲ ನೀಡುವುದಾಗಿ ಸ್ವಾಮೀಜಿ ಹೇಳಿದ್ದಾರೆ. ಬಿಜೆಪಿ ಪಕ್ಷವನ್ನು ಬೆಂಬಲಿಸಲು ಅವರು ತೀರ್ಮಾನಿಸಿದ್ದಾರೆ.
"ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲು ತಮ್ಮ ನಾಮಪತ್ರ ಹಿಂಪಡೆಯುವಂತೆ ಬಿಜೆಪಿಯ ವರಿಷ್ಠರು ಮನವೊಲಿಸಿದರು.. ಅವರ ಒತ್ತಾಯಕ್ಕೆ ಮಣಿದು ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದೆ" ಸ್ವಾಮೀಜಿ ಹೇಳಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಉಡುಪಿಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿರೂರು ಮಠದ ಸ್ವಾಮಿಗಳು ಪಕ್ಃಸದ ಟಿಕೆಟ್ ದೊರಕದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿಯವರು ಉತ್ತಮ ಕೆಲಸ ಮಾಡುತ್ತಿಲ್ಲ. ಪಕ್ಷವನ್ನು ಬಲಪಡಿಸಬೇಕಾಗಿದೆ.ಪಕ್ಷವನ್ನು ಸೋಲಿಸುವುದು ನನ್ನ ಉದ್ದೇಶವಲ್ಲ, ಬಿಜೆಪಿ ನಾಯಕರ ಗಮನ ಸೇಳೆಯುವುದು ಎಂದು ಅವರು ಹೇಳಿದ್ದಾರೆ.
"ನಾನು ಪ್ರಧಾನಿ ಮೋದಿ ಅವರ ಉಪಕ್ರಮಗಳನ್ನು ವಿಶೇಷವಾಗಿ ಅಂತರರಾಷ್ಟ್ರೀಯ ಯೋಗ ದಿನ ಮತ್ತು ಸ್ವಚ್ಚ ಭಾರತ ಅಭಿಯಾನಕ್ಕೆ ಬೆಂಬಲಿಸುತ್ತಿದ್ದೇನೆ.2019 ರಲ್ಲಿ ನಡೆಯಲಿರುವ ಚುನಾವಣೆಗಳು ಆಸಕ್ತಿದಾಯಕವಾಗಲಿದೆ''  ಅವರು ಹೇಳಿದರು.
"ಕಳೆದ ಬಾರಿ ಪ್ರಮೋದ್ ಮದ್ವರಾಜ್ ಅವರನ್ನು ಒಬ್ಬ ವ್ಯಕ್ತಿಯಾಗಿ ಬೆಂಬಲಿಸಿದ್ದೆ, ಅವರ ಪಕ್ಷವನ್ನು ನೋಡಿ ಅಲ್ಲ" ಅವರು ಹೇಳಿದ್ದಾರೆ.
ಕೊತ್ತನೂರು ಮಂಜುನಾಥ್, ಮುನಿಯಪ್ಪ ಪುತ್ರಿ ನಾಮಪತ್ರ ವಾಪಾಸ್
ಕೋಲಾರ ಕ್ಷೇತ್ರದ ಅಭ್ಯರ್ಥಿ ಕೊತ್ತೂರು ಜಿ.ಮಂಜುನಾಥ್‌ ಮತ್ತು ಮುಳಬಾಗಿಲು ಮೀಸಲು ಕ್ಷೇತ್ರದ ಸಂಸದ ಕೆ.ಎಚ್‌.ಮುನಿಯಪ್ಪಪುತ್ರಿ ಎಂ.ನಂದಿನಿ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಕಾಂಗ್ರೆಸ್‌ ವರಿಷ್ಠರ ಸಂಧಾನದ ಕಾರಣ ಅವರು ಚುನಾವಣೆ ರಣಕಣದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಮಂಜುನಾಥ್ ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಾಗು ಕೋಲಾರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ತೊಡಗಿದ್ದರು.
ಕೊತ್ತನೂರು ಮಂಜುನಾಥ್ ಜಾತಿ ಪ್ರಮಾಣಪತ್ರ ವಿಚಾರದಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ವ್ಯತಿರಿಕ್ತ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಮುಳಬಾಗಿಲಿನಲ್ಲಿ ಅವರು ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಆದರೆ, ಕೋಲಾರ ಕ್ಷೇತ್ರದಲ್ಲಿ ಸಲ್ಲಿಸಿದ್ದ ನಾಮಪತ್ರ ಮಾನ್ಯವಾಗಿತ್ತು.
ಇನ್ನೊಂದೆಡೆ ಸಂಸದ ಮುನಿಯಪ್ಪ ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇಲ್ಲದ ಕಾರಣ ತಮ್ಮ ಮಗಳನ್ನೇ ಬೆಂಬಲಿಸುವಂತೆ ಒತ್ತಡ ಹೇರಿದ್ದರು. ಆದರೆ ಪಕ್ಷದಲ್ಲಿ ಇವರಿಬ್ಬರ ಬೇಡಿಕೆಗೆ ಮಾನ್ಯತೆ ಸಿಕ್ಕಿರಲಿಲ್ಲ ಕಡೆಗೆ ವರಿಷ್ಠರು ಸಂಧಾನ ನಡೆಸಿ ಇಬ್ಬರೂ ನಾಮಪತ್ರ ವಾಪಾಸು ಪಡೆಯುವಂತೆ ಮಾಡಲು ಯಶಸ್ವಿಯಾಗಿದ್ದಾರೆ.
ಸಧ್ಯ ಮುಳಬಾಗಿಲಿನಲ್ಲಿ ಮಂಜುನಾಥ್ ಆಪ್ತರಾದ ಸ್ವತಂತ್ರ ಅಭ್ಯರ್ಥಿಗೆ ಪಕ್ಷ ಬೆಂಬಲಿಸಲಿದ್ದರೆ ಕೋಲಾರದಲ್ಲಿ ಪಕ್ಷದ ಅಭ್ಯರ್ಥಿ ಜಮೀರ್‌ ಪಾಷಾ ಮುಂದುವರಿಯಲಿದ್ದಾರೆ.
ಜಗಳೂರಿನಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ 
ಜಗಳೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದ ಪುಷ್ಪಾ ಲಕ್ಷ್ಮಣಸ್ವಾಮಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಮುಂದುವರಿಯಲಿದ್ದಾರೆ.
ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಶುಕ್ರವಾರ ಪುಷ್ಪಾ ನಾಮಪತ್ರ ಹಿಂಪಡೆಯದೆ ಸ್ಪರ್ಧೆ ಒದ್ಡಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದು ಸ್ವತಂತ್ರ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com