ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಆರೋಪಕ್ಕೆ ಬಿಜೆಪಿ ಅಪಹಾಸ್ಯ

ರಾಜ್ಯ ಕಾಂಗ್ರೆಸ್ ನಾಯಕರ ದೂರವಾಣಿಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಜ್ಯ ಕಾಂಗ್ರೆಸ್ ನಾಯಕರ ದೂರವಾಣಿಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಪಾದಿಸಿದ ಬೆನ್ನಲ್ಲೆ ಬಿಜೆಪಿ ನಾಯಕರು ಪ್ರತ್ಯಾರೋಪ ಮಾಡಿದ್ದಾರೆ.

ನಿನ್ನೆ ಆರೋಪ ಮಾಡಿದ್ದ ರಾಮಲಿಂಗಾ ರೆಡ್ಡಿ, ಮೇ 12ರ ಚುನಾವಣೆಗೆ ಪಕ್ಷ ರೂಪಿಸಿಕೊಂಡಿರುವ ತಂತ್ರಗಳ ಕುರಿತು ತಿಳಿದುಕೊಳ್ಳಲು ಹಲವು ಕಾಂಗ್ರೆಸ್ ನಾಯಕರ ಫೋನ್ ಗಳನ್ನು ಬಿಜೆಪಿ ಕದ್ದಾಲಿಕೆ ಮಾಡುತ್ತಿದೆ, ಈ ಮೂಲಕ ಲಜ್ಜೆಗೆಟ್ಟವರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಾರಣವಾಗಿದ್ದು ಕೆಲವು ನಾಯಕರ ಫೋನ್ ಗಳನ್ನು ದಿನಕ್ಕೆ 18 ಗಂಟೆಗಳ ಕಾಲ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿತ್ತು.

ಕಾಂಗ್ರೆಸ್ ನಾಯಕರ ಸಂಭಾಷಣೆಗಳನ್ನು ದಾಖಲು ಮಾಡಿಕೊಂಡು ಅದನ್ನು ಹಿಂದಿ ಮತ್ತು ಇಂಗ್ಲಿಷ್ ಗೆ ಅನುವಾದ ಕೂಡ ಮಾಡಲಾಗುತ್ತಿದೆ ಎಂದು ರೆಡ್ಡಿ ದೂರಿದ್ದರು.

ಈ ಹೇಳಿಕೆಯಿಂದ ಕೆಂಡಮಂಡಲವಾಗಿರುವ ಬಿಜೆಪಿಯ ವಕ್ತಾರ ಸುಧಾಂಶು ತ್ರಿವೇದಿ ರಾಮಲಿಂಗಾ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದರಲ್ಲಿ ರಾಜ್ಯ ಕಾಂಗ್ರೆಸ್ ನ ಪಾತ್ರವಿದೆ ಎಂದು ಆರೋಪದಿಂದ ತಿಳಿಯುತ್ತದೆ. ಕಾಂಗ್ರೆಸ್ ನಾಯಕರ ಫೋನ್ ಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಆರೋಪದಿಂದ ನಗು ಬರುತ್ತಿದೆ ಎಂದು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಇದು ಸದ್ಯದಲ್ಲಿಯೇ ಅವರ ಸೋಲಿಗೆ ಒಂದು ಕುಂಟು ನೆಪವಾಗಿದೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com