ಕಲಬುರ್ಗಿ: ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಕ್ಷಮೆ ಕೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಭಾನುವಾರ ಆಗ್ರಹಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ, ಸಿದ್ದರಾಮಯ್ಯ ಅವರು ಮರಾಠಿ ಭಾಷಿಕರ ಕ್ಷಮೆ ಕೇಳಿದ್ದು ಅಕ್ಷಮ್ಯ ಅಪರಾಧ ಎಂದಿದ್ದಾರೆ.
ಸಿದ್ದರಾಮಯ್ಯ ಅವರು ಒಬ್ಬ ಮುಖ್ಯಮಂತ್ರಿಯಾಗಿ ಮರಾಠಿಗರ ಕ್ಷಮೆಯಾಚಿಸುವ ಮೂಲಕ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ. ಆದ್ದರಿಂದ ಅವರು ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಬಿಎಸ್ ವೈ ಒತ್ತಾಯಿಸಿದರು.
ಮರಾಠಿಗರೂ ನಮ್ಮವರೆ. ಎಲ್ಲರೊಂದಿಗೆ ಬಾಂಧವ್ಯದಿಂದ ಇದ್ದಾರೆ. ಹಾಗಂತ ಮುಖ್ಯಮಂತ್ರಿ ಆದವರು ಕ್ಷಮೆ ಕೇಳುವುದು ಸರಿಯಲ್ಲ ಎಂದರು.
ನಿನ್ನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕು ಬೇಡಕಿಹಾಳ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಅವರು, ನನಗೆ ಮರಾಠಿ ಬರುವುದಿಲ್ಲ. ಕ್ಷಮಿಸಬೇಕು ಎಂದಿದ್ದರು.