
ಬೆಂಗಳೂರು: ನಗರದ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಶಾಸಕರನ್ನು ಆಯ್ಕೆ ಮಾಡುವ ವಿಚಾರ ಬಂದಾಗ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳೆಲ್ಲರೂ ಒಕ್ಕಲಿಗರಾಗಿದ್ದಾರೆ.
ಒಕ್ಕಲಿಗರ ಪ್ರಮುಖ ಮಠವಾಗಿರುವ ಆದಿಚುಂಚನಗಿರಿ ಮಠ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ. ಎಲ್ಲಾ ರಾಜಕೀಯ ಮುಖಂಡರು ಈ ಮಠದ ಶ್ರೀಗಳ ಆಶೀರ್ವಾದ ಪಡೆಯಲು ಬಯಸುತ್ತಾರೆ. ಕಳೆದ ಕೆಲವು ಚುನಾವಣೆಗಳಲ್ಲಿ ವಿಜಯನಗರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಗೆಲುವಿನ ರುಚಿ ಕಂಡಿರಲಿಲ್ಲ.
ಈ ಬಾರಿ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಹಿರಿಯ ಕಾರ್ಪೊರೇಟರ್ ಹೆಚ್, ರವೀಂದ್ರ, ಕಾಂಗ್ರೆಸ್ ನಿಂದ ವಸತಿ ಖಾತೆ ಸಚಿವ ಎಂ.ಕೃಷ್ಣಪ್ಪ, ಜೆಡಿಎಸ್ ನಿಂದ ಪರಮಶಿವಯ್ಯ ಎನ್ ಇ ಕಣಕ್ಕಿಳಿದಿದ್ದಾರೆ.
2013ರಲ್ಲಿ ಎಂ.ಕೃಷ್ಣಪ್ಪ ಲಿಂಗಾಯತ ಮುಖಂಡ ವಿ.ಸೋಮಣ್ಣ ಅವರನ್ನು ಸೋಲಿಸಿದ್ದರು. ಅದು 32,42 ಮತಗಳ ಅಂತರದಲ್ಲಿ. ಅಂದು ಜಾತಿ ರಾಜಕಾರಣ ಕೃಷ್ಣಪ್ಪ ಗೆಲುವಿಗೆ ಕಾರಣವಾಗಿತ್ತು. ಈ ಬಾರಿ ಒಕ್ಕಲಿಗ ಮತಗಳನ್ನು ಹಂಚಿಕೆ ಮಾಡುವ ಲೆಕ್ಕಾಚಾರದಲ್ಲಿ ಬಿಜೆಪಿ ರವೀಂದ್ರ ಅವರನ್ನು ಕಣಕ್ಕಿಳಿಸಿದೆ. ರವೀಂದ್ರ ಅವರು ಸೋಮಣ್ಣ ಅವರ ಮಾರ್ಗದರ್ಶನದಂತೆ ರಾಜಕೀಯವಾಗಿ ಬೆಳೆದವರು.
ಕೃಷ್ಣಪ್ಪ ವಿಜಯನಗರ ಕ್ಷೇತ್ರದಲ್ಲಿ ಕಳೆದೆರಡು ಅವಧಿಯಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದಾರೆ. ಎರಡೂ ಸಲ ಕೂಡ ಅತಿ ದೊಡ್ಡ ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಈ ಬಾರಿ ಕೂಡ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಆದರೆ ಬಿಜೆಪಿಯ ರವೀಂದ್ರ ಕೂಡ ಆದಿಚುಂಚನಗಿರಿ ಮಠದ ಬೆಂಬಲ ಹೊಂದಿದ್ದು ಕೃಷ್ಣಪ್ಪಗೆ ಭಾರೀ ಸ್ಪರ್ಧೆಯೊಡ್ಡುವ ಸಾಧ್ಯತೆಯಿದೆ.
ರವೀಂದ್ರ ಅವರ ಪುತ್ರಿ ಮಹಾಲಕ್ಷ್ಮಿ ಹೊಸಹಳ್ಳಿಯ ಕಾರ್ಪೊರೇಟರ್ ಆಗಿದ್ದು, ಅದು ವಿಜಯನಗರ ಕ್ಷೇತ್ರದಲ್ಲಿಯೇ ಬರುತ್ತದೆ. ಬಿಬಿಎಂಪಿ ಮಂಡಳಿಯಲ್ಲಿ ಅವರೇ ಅತಿ ಚಿಕ್ಕ ವಯಸ್ಸಿನ ಕಾರ್ಪೊರೇಟರ್ ಆಗಿದ್ದಾರೆ. ಇನ್ನು ಜೆಡಿಎಸ್ ನ ಪರಮಶಿವ ಹೊಸ ಅಭ್ಯರ್ಥಿಯಾಗಿದ್ದು ಮತದಾರರನ್ನು ಸೆಳೆಯಲು ಅವರು ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಅವರ ಪ್ರಚಾರವನ್ನು ನಂಬಿಕೊಂಡಿದ್ದಾರೆ.
ಎಂಟು ವಾರ್ಡುಗಳು: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಎಂಟು ವಾರ್ಡುಗಳಿವೆ. ವಿಜಯನಗರ, ಹೊಸಹಳ್ಳಿ, ಅತ್ತಿಗುಪ್ಪೆ, ಹಂಪಿನಗರ ಮತ್ತು ದೀಪಾಂಜಲಿ ನಗರಗಳಲ್ಲಿ ಬಿಜೆಪಿ ಕಾರ್ಪೊರೇಟರ್ ಗಳಿದ್ದರೆ, ಬಾಪೂಜಿನಗರ ಮತ್ತು ಗಾಳಿ ಆಂಜನೇಯ ದೇವಸ್ಥಾನ ವಾರ್ಡುಗಳಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಗಳು ಮತ್ತು ಕೆಂಪಾಪುರ ಅಗ್ರಹಾರದಲ್ಲಿ ಸ್ವತಂತ್ರ ಕಾರ್ಪೊರೇಟರ್ ಇದ್ದಾರೆ.
Advertisement