ಚುನಾವಣೆಯಲ್ಲಿ ಒಂದು ಕ್ಷೇತ್ರದಿಂದ ಸ್ಪರ್ಧಿಸಲು ಹೆಚ್ ಡಿಕೆ ಖರ್ಚು ಮಾಡಿದ್ದು ಕೇವಲ 9 ಲಕ್ಷ ರೂಪಾಯಿ!

ಕೋಟಿಗಟ್ಟಲೆ ಹಣ ವೆಚ್ಚಮಾಡಬೇಕಾದ ಪರಿಸ್ಥಿತಿಯಿರುವುದರಿಂದ ಹಲವು ರಾಜಕೀಯ ಆಕಾಂಕ್ಷಿಗಳು ...
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಕೋಟಿಗಟ್ಟಲೆ ಹಣ ವೆಚ್ಚಮಾಡಬೇಕಾದ ಪರಿಸ್ಥಿತಿಯಿರುವುದರಿಂದ ಹಲವು ರಾಜಕೀಯ ಆಕಾಂಕ್ಷಿಗಳು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಾರೆ. ಅವರಲ್ಲಿ ಚುನಾವಣೆಗೆ ಸ್ಪರ್ಧಿಸಲು, ಧಾರಾಳವಾಗಿ ಖರ್ಚು ಮಾಡಲು ಹಣವಿರುವುದಿಲ್ಲ. ರಾಜಕೀಯಕ್ಕೆ ಹೋಗಲು, ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದರೆ ಹಣಬಲ, ತೋಳ್ಬಲದ ಅವಶ್ಯಕತೆಯಿರುತ್ತದೆ ಎಂಬ ಮನೋಧರ್ಮ ಸಾಮಾನ್ಯವಾಗಿ ರಾಜಕೀಯದಲ್ಲಿ ಇದೆ.

ಆದರೆ ಇಂತಹ ಯೋಚನೆ ನಿಮ್ಮಲ್ಲಿದ್ದರೆ ಮತ್ತೊಮ್ಮೆ ಯೋಚಿಸುವ ಅವಶ್ಯಕತೆಯಿದೆ. ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಾವು ಮಾಡಿದ ಖರ್ಚುವೆಚ್ಚದ ಬಗ್ಗೆ ಚುನಾವಣಾ ಆಯೋಗಕ್ಕೆ ರಾಜಕೀಯ ನಾಯಕರು ಸಲ್ಲಿಸಿದ ಅಫಿಡವಿಟ್ಟು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ, ಇದು ನಿಜವೇ ಎನಿಸುತ್ತದೆ.

ರಾಮನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಖರ್ಚು ಮಾಡಿದ್ದು ಕೇವಲ 9 ಲಕ್ಷದ 51 ಸಾವಿರ ರೂಪಾಯಿ ಮತ್ತು ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರ ಮತ್ತು ಇತರ ಖರ್ಚು ವೆಚ್ಚಗಳಿಗೆ 10 ಲಕ್ಷದ 22 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಇನ್ನು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಕೊರಟಗೆರೆಯಲ್ಲಿ ಖರ್ಚು ಮಾಡಿದ ಹಣ 8 ಲಕ್ಷದ 69 ಸಾವಿರ ರೂಪಾಯಿಗಳು.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಪ್ರತಿ ಕ್ಷೇತ್ರದಲ್ಲಿ 28 ಲಕ್ಷದವರೆಗೆ ಖರ್ಚು ಮಾಡಬಹುದು ಎಂದು ಮಿತಿ ಹಾಕಿದೆ. ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಿತಿಯೊಳಗೆ ಖರ್ಚು ಮಾಡಿದ್ದಾರೆ. ಇಲ್ಲಿ ಆಸಕ್ತಿಕರ ವಿಷಯವೆಂದರೆ ಕುಮಾರಸ್ವಾಮಿಯವರು ಎರಡು ಕ್ಷೇತ್ರಗಳಲ್ಲಿ ಮತ್ತು ಪರಮೇಶ್ವರ್ ಅವರು ಒಂದು ಕ್ಷೇತ್ರದಲ್ಲಿ ಮಾಡಿರುವ ಖರ್ಚು ಒಬ್ಬ ಅಭ್ಯರ್ಥಿ ಕ್ಷೇತ್ರದಲ್ಲಿ ಮಾಡುವ ಖರ್ಚಿನ ಮಿತಿಯ ಒಳಗೇ ಇದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಲು 17.51 ಲಕ್ಷ ರೂಪಾಯಿ ಮತ್ತು ಬಾದಾಮಿಯಲ್ಲಿ ಸ್ಪರ್ಧಿಸಲು 19.60 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಬಿ ಎಸ್ ಯಡಿಯೂರಪ್ಪನವರು ಶಿಕಾರಿಪುರ ಕ್ಷೇತ್ರದಲ್ಲಿ 18.14 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

ಆದರೆ ರಾಜಕೀಯ ನಾಯಕರು ಸಲ್ಲಿಸಿರುವ ಚುನಾವಣಾ ವೆಚ್ಚದ ಅಫಿಡವಿಟ್ಟು ಒಂದು ಪ್ರಹಸನದ ರೀತಿ ಇದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ರಾಜಕೀಯ ನಾಯಕರು ಸಲ್ಲಿಸಿರುವ ಅಫಿಡವಿಟ್ಟಿನ ನಿಖರತೆಯನ್ನು ಪ್ರಶ್ನಿಸಿದ್ದಾರೆ. ಸಾರ್ವಜನಿಕ ರ್ಯಾಲಿಗಳನ್ನು ಆಯೋಜಿಸಲು, ಪ್ರಚಾರ ವಾಹನಗಳಿಗೆ, ಕಾರ್ಯಕರ್ತರಿಗೆ, ಪ್ರಚಾರ ಸಾಮಗ್ರಿಗಳಿಗೆ ಮತ್ತು ಮತದಾರರಿಗೆ ಹಣ ಹಂಚಲು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ ಎಂದು ಖಾಸಗಿಯಾಗಿ ಕೆಲವು ನಾಯಕರೇ ಒಪ್ಪಿಕೊಂಡಿದ್ದಾರೆ.

ಇಂದು ಕಾಲೇಜು ಯೂನಿಯನ್ ಚುನಾವಣೆಗೆ ಸ್ಪರ್ಧಿಸಲು ಲಕ್ಷಗಟ್ಟಲೆ ವೆಚ್ಚವಾಗುತ್ತದೆ. ಅಂತಹುದರಲ್ಲಿ ವಿಧಾನಸಭೆ ಚುನಾವಣೆಗೆ ಇಷ್ಟು ಕಡಿಮೆ ವೆಚ್ಚ ಮಾಡಲು ಸಾಧ್ಯವೇ ಎಂದು ಕೇಳುತ್ತಾರೆ ರಾಜಕೀಯ ವಿಶ್ಲೇಷಕ ಹರೀಶ್ ರಾಮಸ್ವಾಮಿ.

ಪ್ರಮುಖ ನಾಯಕರ ಚುನಾವಣಾ ವೆಚ್ಚಗಳ ಪಟ್ಟಿ ಇಂತಿದೆ.
ಹೆಚ್ ಡಿ ಕುಮಾರಸ್ವಾಮಿ-9.51 ಲಕ್ಷ(ರಾಮನಗರ)
ಹೆಚ್ ಡಿ ಕುಮಾರಸ್ವಾಮಿ-10.22(ಚನ್ನಪಟ್ಟಣ)
ಸಿದ್ದರಾಮಯ್ಯ-19.60(ಬಾದಾಮಿ)
ಸಿದ್ದರಾಮಯ್ಯ -17.51 ಲಕ್ಷ(ಚಾಮುಂಡೇಶ್ವರಿ)
ಬಿ ಎಸ್ ಯಡಿಯೂರಪ್ಪ-18.14(ಶಿಕಾರಿಪುರ)
ಜಿ ಪರಮೇಶ್ವರ್ -8.69 ಲಕ್ಷ(ಕೊರಟಗೆರೆ)
ಡಿ ಕೆ ಶಿವಕುಮಾರ್ -12.96 ಲಕ್ಷ(ಕನಕಪುರ)
ಜಗದೀಶ್ ಶೆಟ್ಟರ್-16.56 ಲಕ್ಷ(ಹುಬ್ಬಳ್ಳಿ-ಧಾರವಾಡ ಕ್ಷೇತ್ರ)
ಜಿ ಟಿ ದೇವೇಗೌಡ-10.64(ಚಾಮುಂಡೇಶ್ವರಿ)
ಹೆಚ್ ಡಿ ರೇವಣ್ಣ-9.90 ಲಕ್ಷ(ಹೊಳೆನರಸೀಪುರ)
ಜಮೀರ್ ಅಹ್ಮದ್ ಖಾನ್-26.93 ಲಕ್ಷ(ಚಾಮರಾಜಪೇಟೆ)
ದಿನೇಶ್ ಗುಂಡೂರಾವ್-18.88 ಲಕ್ಷ(ಗಾಂಧಿನಗರ)
ಆರ್ ವಿ ದೇಶಪಾಂಡೆ-22.25 ಲಕ್ಷ (ಹಳಿಯಾಳ)
ಕೆ ಎಸ್ ಈಶ್ವರಪ್ಪ-17.80 ಲಕ್ಷ(ಶಿವಮೊಗ್ಗ)
ಕೃಷ್ಣ ಭೈರೇಗೌಡ-4.36 ಲಕ್ಷ(ಬ್ಯಾಟರಾಯನಪುರ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com